ರಾಜಕೀಯ

ಬ್ರಾಂಡ್ ಬೆಂಗಳೂರು ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಗೆ ಇಲ್ಲ: ಸಿಎಂ ಸಿದ್ದರಾಮಯ್ಯ

Lingaraj Badiger

ಬೆಳಗಾವಿ: ರಾಜ್ಯದಲ್ಲಿ ನಾಲ್ಕು ವರ್ಷಗಳ ಕಾಲ ತಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದ ಬಿಜೆಪಿಗೆ ಬ್ರಾಂಡ್ ಬೆಂಗಳೂರು ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಪ್ರತಿಪಕ್ಷವನ್ನು ತರಾಟೆಗೆ ತೆಗೆದುಕೊಂಡರು.

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಆರು ತಿಂಗಳ ಹಿಂದೆಯಷ್ಟೇ ನಾವು ಅಧಿಕಾರಕ್ಕೆ ಬಂದಿದ್ದೆವು. ಅದಕ್ಕೂ ಮುನ್ನ ಬಿಜೆಪಿ ನಾಲ್ಕು ವರ್ಷ ಅಧಿಕಾರದಲ್ಲಿತ್ತು. ಬ್ರಾಂಡ್ ಬೆಂಗಳೂರು ಮಾಡಿದ್ದೀರಾ? ನಾಲ್ಕು ವರ್ಷದಲ್ಲಿ ಏನು ಮಾಡಿದಿರಿ ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಶ್ನಿಸಿದರು.

ಬಿಜೆಪಿ ಕಾಲದಲ್ಲಿ ಗುಂಡಿ ಮುಚ್ಚುವುದಕ್ಕೆ ಹೈಕೋರ್ಟ್‌ ಛೀಮಾರಿ ಹಾಕಿತ್ತು. ಬಿಜೆಪಿ ಅವರು ಬೆಂಗಳೂರಿಗೆ ಏನು ಮಾಡಿದ್ದಾರೆ? ಗುಂಡಿ ಮುಚ್ಚಲಿಕ್ಕೆ ಆಗಿಲ್ಲ ಅವರಿಗೆ ಎಂದು ಉಗಿದಿತ್ತು. ಹೀಗಾಗಿ ಬ್ರ್ಯಾಂಡ್‌ ಬೆಂಗಳೂರು ಬಗ್ಗೆ ಮಾತಾಡುವ ನೈತಿಕತೆ ಬಿಜೆಪಿ ಅವರಿಗಿಲ್ಲ ಎಂದು ಸಿಎಂ ಕಿಡಿಕಾರಿದರು.

ಬೆಂಗಳೂರನ್ನು ಜಾಗತಿಕ ನಗರವನ್ನಾಗಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರದ 'ಬ್ರಾಂಡ್ ಬೆಂಗಳೂರು' ಎಂಬ ಉಪಕ್ರಮ ಜಾರಿಗೆ ತರುತ್ತಿದೆ ಎಂದರು.

ತೆಲಂಗಾಣದಲ್ಲಿ(ಕಾಂಗ್ರೆಸ್‌ನ ಚುನಾವಣಾ ಸಂಬಂಧಿತ ಕೆಲಸಕ್ಕಾಗಿ) ‘ಎಲ್ಲಾ ಸಚಿವರು ಬೀಡು ಬಿಟ್ಟಿದ್ದರಿಂದ ಆಡಳಿತಕ್ಕೆ ಹೊಡೆತ ಬಿದ್ದಿದೆ’ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಅಲ್ಲಿಗೆ ಹೋಗಿದ್ದು ಎಲ್ಲರೂ ಅಲ್ಲ. ಕೆಲವರು ಮಾತ್ರ ಎಂದು ಸ್ಪಷ್ಟಪಡಿಸಿದರು.

ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಮುನಿಯಪ್ಪ ಮತ್ತು ಇಂಧನ ಸಚಿವ ಕೆ ಜೆ ಜಾರ್ಜ್ ಅವರು ತೆಲಂಗಾಣದಿಂದ ರಾಜ್ಯಕ್ಕೆ ಮರಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರು ಮಾತ್ರ ಇನ್ನೂ ತೆಲಂಗಾಣದಲ್ಲಿದ್ದಾರೆ. ಅಲ್ಲಿ ಕಾಂಗ್ರೆಸ್ ಗೆದ್ದಿದೆ ಎಂದು ಸಿಎಂ ತಿಳಿಸಿದರು.

SCROLL FOR NEXT