ರಾಜಕೀಯ

ಯಾತ್ನಾಳ್ ರ ನಿಜವಾದ ಗುರಿ ಪ್ರಧಾನಿ ಮೋದಿ; 'ಜೀ' ಗಳ ಬಲದಿಂದ ಸ್ವಪಕ್ಷೀಯರ ವಿರುದ್ಧವೇ ಆರೋಪ: ಸಿಎಂ ಸಿದ್ದರಾಮಯ್ಯ

Nagaraja AB

ಬೆಂಗಳೂರು: ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರ ನಿಜವಾದ ಗುರಿ ಪ್ರಧಾನಿ ನರೇಂದ್ರ ಮೋದಿ ಎನ್ನುವುದು ನಿಧಾನವಾಗಿ ಬಯಲಾಗತೊಡಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಸರಣಿ ಫೋಸ್ಟ್ ಮಾಡಿರುವ ಮುಖ್ಯಮಂತ್ರಿ, ಮೌಲ್ವಿ ಹಾಶ್ಮಿ ಅವರ ಜೊತೆಗೆ ಇತರ ಬಿಜೆಪಿ ನಾಯಕರು ಮಾತ್ರವಲ್ಲ ಸಾಕ್ಷಾತ್ ನರೇಂದ್ರ ಮೋದಿ ಅವರೂ ಸಂಬಂಧ ಹೊಂದಿರುವುದು ಮಾಧ್ಯಮಗಳಲ್ಲಿ ಬಿಡುಗಡೆಯಾಗಿರುವ ಪೋಟೊಗಳು ಸ್ಪಷ್ಟವಾಗಿ ಹೇಳುತ್ತಿವೆ. ದೀರ್ಘಕಾಲದಿಂದ ಹಾಶ್ಮಿ ಅವರಿಗೆ ಅತ್ಯಂತ ಆತ್ಮೀಯರಾಗಿರುವ ಮತ್ತು ಊರಿನಲ್ಲಿ ತನ್ನ ನೆರೆಹೊರೆಯಾಗಿರುವ ಯತ್ನಾಳ್ ಅವರಿಗೆ ಇದು ತಿಳಿದಿರಲಿಲ್ಲ ಎನ್ನುವುದನ್ನು ನಂಬಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. 

ಯತ್ನಾಳ್ ಈ ರೀತಿಯ ಆರೋಪಗಳನ್ನು ಮಾಡುವುದು ಇದೇ ಮೊದಲ ಸಲವೇನಲ್ಲ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಅವರ ಮಕ್ಕಳ ವಿರುದ್ಧ ಪುಂಖಾನುಪುಂಖವಾಗಿ ಆರೋಪ ಮಾಡಿದ್ದಾರೆ.  ತಮ್ಮ ಪಕ್ಷದ ಉನ್ನತ ನಾಯಕರ ವಿರುದ್ಧವೇ ಆರೋಪ ಮಾಡುತ್ತಿರುವ ಯತ್ನಾಳ್ ಅವರ ಬಾಯಿಬಲದ ಹಿಂದೆ ಇರುವ ಶಕ್ತಿ ಯಾವುದು? ಬಿಜೆಪಿಯಲ್ಲಿರುವ ಯಾವ ‘ಜೀ’’ ಗಳ ಬಲದಿಂದ ಇಂತಹ ಸ್ವಪಕ್ಷೀಯರ ವಿರುದ್ಧ ಇಂತಹ ಮಾನಹಾನಿಕರ ಆರೋಪ ಮಾಡಿಯೂ ಅವರೂ ಬಚಾವಾಗುತ್ತಿದ್ದಾರೆ ಎನ್ನುವುದು ಕೂಡಾ ಬಯಲಾಗಬೇಕಾಗಿದೆ ಎಂದಿದ್ದಾರೆ. 

ರಾಜ್ಯ ಬಿಜೆಪಿ ಅಧ್ಯಕ್ಷತೆ ಮತ್ತು ವಿರೋಧ ಪಕ್ಷದ ನಾಯಕನ ಸ್ಥಾನ ತಪ್ಪಿಹೋಗಿರುವುದರಿಂದ ಅವರು ಕೆರಳಿ ಕೆಂಡವಾಗಿದ್ದಾರೆ. ಇದಕ್ಕೆ ಕಾರಣಕರ್ತರಾದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ವಿರುದ್ಧ  ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮೌಲ್ವಿ ತನ್ವೀರ್ ಹಾಶ್ಮಿ ಜೊತೆಗಿನ ನನ್ನ ಪೋಟೋವನ್ನು ತೋರಿಸಿ ಆರೋಪ ಮಾಡಿದ್ದಾರೆ. ಈ ಆರೋಪದ ನಂತರ ಮೌಲ್ವಿ ಅವರ ಜೊತೆಗಿನ ಪ್ರಧಾನಿ ನರೇಂದ್ರ ಮೋದಿ ಅವರ ಸಂಬಂಧದ ವಿವರವೂ ಹೊರಬರಲಿದೆ ಎನ್ನುವುದು ಅವರಿಗೆ ಖಂಡಿತ ಗೊತ್ತಿತ್ತು. ಅವೆಲ್ಲವೂ ಬಯಲಾಗಿ ಪ್ರಧಾನಿ ಮತ್ತು ಬಿಜೆಪಿ ನಾಯಕರು ಮುಜುಗರಕ್ಕೀಡಾಗಲಿ ಎನ್ನುವ ದುರುದ್ದೇಶದಿಂದ ನನ್ನ ವಿರುದ್ಧ ಆರೋಪ ಮಾಡುವ ಆಟ ಆಡಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. 

ಮೌಲ್ವಿ ಹಾಶ್ಮಿ ಅವರ ಜೊತೆಗಿನ ನನ್ನ ಸ್ನೇಹ ಸಂಬಂಧವನ್ನು ನಾನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದೇನೆ. ಹಾಶ್ಮಿಯವರೂ ಕೂಡಾ ಅವರ ಮೇಲಿನ ಆರೋಪದ ತನಿಖೆಯನ್ನು ಕೇಂದ್ರ ಬಿಜೆಪಿ ಸರ್ಕಾರವೇ ನಡೆಸಲಿ ಎಂದು ಸವಾಲು ಹಾಕಿದ್ದಾರೆ. ಈಗ ಪ್ರಧಾನಿ ಮೋದಿ ಅವರು ತನ್ನ ವಿರುದ್ಧದ ಆರೋಪಕ್ಕೆ ಪ್ರತಿಕ್ರಿಯಿಸಲೇ ಬೇಕಾಗುತ್ತದೆ. ಮೌಲಿ ತನ್ವೀರ್ ಹಾಶ್ಮಿ ಅವರಿಗೆ ನಿಜವಾಗಿ ಐಸಿಎಸ್ ಜೊತೆ ಸಂಬಂಧ ಇದ್ದರೆ ಆ ಬಗ್ಗೆ ತನಿಖೆಗೆ ಪ್ರಧಾನಿಯವರು ತಕ್ಷಣ ಆದೇಶ ನೀಡಬೇಕು ಮತ್ತು ಹಾಶ್ಮಿ ಮತ್ತು ತನ್ನ ಸಂಬಂಧದ ವಿವರವನ್ನು ದೇಶದ ಮುಂದಿಡಬೇಕು. ಇದು ಎರಡೂ ಮಾಡದೆ ಇದ್ದರೆ ಇಂತಹ ಸುಳ್ಳು ಆರೋಪ ಮಾಡುವ ಯತ್ನಾಳ್ ವಿರುದ್ಧ ಕ್ರಮವನ್ನಾದರೂ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

SCROLL FOR NEXT