ರಾಜಕೀಯ

2024 ಲೋಕಸಭಾ ಚುನಾವಣೆ: ಕಾಂಗ್ರೆಸ್ ನಿಂದ ಟಿಕೆಟ್ ಆಫರ್ ನೀಡಿದ ಡಿಕೆಶಿ; ಶಿವಣ್ಣ ಹೇಳಿದ್ದು ಹೀಗೆ...

Nagaraja AB

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಸಿದ್ಧತೆ ಈಗಾಗಲೇ ಆರಂಭವಾಗಿರುವಂತೆಯೇ, ಕೆಪಿಸಿಸಿ ಅಧ್ಯಕ್ಷರು ಆಗಿರುವ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ಆಫರ್ ನೀಡಿದ್ದಾರೆ. 

ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಈಡಿಗ ಸಮುದಾಯದ ಬೃಹತ್ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಪಾರ್ಲಿಮೆಂಟಿಗೆ ತಯಾರಿಯಾಗಲು ಶಿವಣ್ಣಗೆ ಹೇಳಿದ್ದೇನೆ. ಅವರು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಿದರೂ ಟಿಕೆಟ್ ನೀಡುವುದಾಗಿ ಹೇಳಿರುವುದಾಗಿ ತಿಳಿಸಿದರು.

ಆದರೆ, ಶಿವಣ್ಣ ಈಗಾಗಲೇ ಐದಾರು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಅವುಗಳ ಚಿತ್ರೀಕರಣ ಮುಗಿಯಬೇಕು ಎಂದಿದ್ದಾರೆ. ಚಿತ್ರ ಯವಾಗದರೂ ಮಾಡಬಹುದು, ಆದರೆ ಪಾರ್ಲಿಮೆಂಟ್ ಹೋಗುವ ಅವಕಾಶ ಎಲ್ಲರಿಗೂ ಸಿಗಲ್ಲ ಎಂದು ಹೇಳಿದ್ದೇನೆ. ಅವರ ನಿರ್ಧಾರಕ್ಕೆ ಎದುರು ನೋಡುತ್ತಿದ್ದೇನೆ ಎಂದರು.

ನಂತರ ಮಾತನಾಡಿದ ಶಿವರಾಜ್ ಕುಮಾರ್,  ನಮ್ಮದೇನಿದ್ದರೂ ಮೇಕಪ್ ಹಾಕೋದು ಸಿನಿಮಾ ಮಾಡೋದು. ನಾನು ಎಂದಿಗೂ ರಾಜಕೀಯಕ್ಕೆ ಬರೋಲ್ಲ. ನಮ್ಮ ತಂದೆ ಬಣ್ಣ ಹಚ್ಚಿ ನಟನೆ ಮಾಡುವುದನ್ನು ಕೇಳಿ ಕೊಟ್ಟಿದ್ದಾರೆ. ಅದೇ ಸಾಕು ನಮಗೆ. ನಮ್ಮ ತಂದೆ ಕೊಟ್ಟಿರುವ ಬಳುವಳಿ ಬಣ್ಣ ಹಚ್ಚೋದನ್ನು ಮುಂದುವರಿಸಿಕೊಂಡು ಹೋಗುತ್ತೇನೆ. ರಾಜಕೀಯ ನಮಗೆ ಬೇಡ ಎಂದರು.

ಆದರೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಮಗಳು ನಮ್ಮನೆ ಸೊಸೆಯಾಗಿದ್ದಾರೆ. ಗೀತಾ ಬೇಕಾದ್ರೆ ರಾಜಕೀಯಕ್ಕೆ ಹೋಗಲಿ, ಹೆಂಡತಿ ಇಷ್ಟಪಟ್ಟರೆ ಅವರಿಗೆ ಸಪೋರ್ಟ್ ಮಾಡೋದು ಗಂಡನ ಕೆಲಸ. ಅವರು ಚುನಾವಣೆಗೆ ನಿಲ್ಲುತ್ತಾರೆಂದರೆ ಅವರ ಹಿಂದೆ ನಿಂತು ಬೆಂಬಲ ಕೊಡುತ್ತೇನೆ ಎಂದು ಶಿವಣ್ಣ ಹೇಳಿದರು.

SCROLL FOR NEXT