ರಾಜಕೀಯ

ನಿಗಮ-ಮಂಡಳಿ ಅಧ್ಯಕ್ಷರ ನೇಮಕ: ಮುಂದಿನ ವಾರ ದೆಹಲಿಗೆ ಸಿದ್ದು-ಡಿಕೆಶಿ, 29 ಶಾಸಕರಿಗೆ ಅಧಿಕಾರ ಸಾಧ್ಯತೆ

Manjula VN

ಬೆಂಗಳೂರು: ಸರ್ಕಾರದ ನಿಗಮ ಮಂಡಳಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ನೇಮಕಾತಿ ಪಟ್ಟಿಗೆ ಸಂಬಂಧಿಸಿದಂತೆ ದೆಹಲಿಯಲ್ಲಿ ಮಹತ್ವದ ಸಭೆ ನಿಗದಿ ಮಾಡಲಾಗಿದ್ದು, ಸಭೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಮುಂದಿನ ವಾರ ರಾಷ್ಟ್ರರಾಜಧಾನಿಗೆ ಭೇಟಿ ನೀಡಲಿದ್ದಾರೆಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುಜೇìವಾಲ ಅವರೊಂದಿಗೆ ಸಭೆ ನಡೆಸಲಿದ್ದಾರೆ.

ಮೂವರು ನಾಯಕರು ಈಗಾಗಲೇ ಬೆಂಗಳೂರಿನಲ್ಲಿ ಮೂರು ಸುತ್ತಿನ ಸಭೆ ನಡೆಸಿ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ನೇಮಿಸಬಹುದಾದ 25 ಶಾಸಕರು ಹಾಗೂ ನಾಲ್ವರು ವಿಧಾನ ಪರಿಷತ್ತಿನ ಸದಸ್ಯರ ಸಂಭವನೀಯ ಪಟ್ಟಿಯನ್ನು ಸಿದ್ಧಪಡಿಸಿ ಹೈಕಮಾಂಡ್‌ಗೆ ಅನುಮೋದನೆಗೆ ಕಳುಹಿಸಿಕೊಟ್ಟಿದ್ದರು.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನ ಆರಂಭಕ್ಕೆ ಮುನ್ನವೇ ಶಾಸಕರಿಗೆ ಅಧಿಕಾರದ ಭಾಗ್ಯ ಲಭಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎರಡು ವಾರಗಳ ಕಾಲದ ಅಧಿವೇಶನ ಮುಕ್ತಾಯಗೊಂಡರೂ ಹೈಕಮಾಂಡ್‌ನಿಂದ ಪಟ್ಟಿ ಬಿಡುಗಡೆಯಾಗಲಿಲ್ಲ.

ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಕೆಲವು ಶಾಸಕರು, “ನಮಗೆ ಅನುದಾನವೂ ಇಲ್ಲ, ನಿಗಮ, ಮಂಡಳಿಗಳ ಅಧ್ಯಕ್ಷ ಸ್ಥಾನವೂ ಇಲ್ಲ, ಹೀಗಾದರೆ ಹೇಗೆ’ ಎಂದು ಪ್ರಶ್ನಿಸಿದಾಗ, “ಆದಷ್ಟು ಬೇಗ ನೇಮಕ ಮಾಡಲಾಗುವುದು, ಸುಮ್ಮನಿರಿ’ ಎಂದು ಸಿಎಂ ಸಿದ್ದರಾಮಯ್ಯ ಸಮಾಧಾನಪಡಿಸಿದ್ದರು.

ಶಾಸಕರಲ್ಲಿ ಅಸಮಾಧಾನ ಹೊಗೆಯಾಡುತ್ತಿರುವುದನ್ನು ಅರಿತ ಸಿದ್ದರಾಮಯ್ಯ ಹಾಗೂ ಡಿಕೆ.ಶಿವಕುಮಾರ್ ಅವರು ಕಾಂಗ್ರೆಸ್‌ ಹೈಕಮಾಂಡ್‌ ಜೊತೆ ಅಂತಿಮ ಸುತ್ತಿನ ಮಾತುಕತೆಗೆ ನಿರ್ಧರಿಸಿದ್ದು, ಮುಂದಿನವಾರ ದೆಹಲಿಗೆ ತೆರಳಲು ದಿನಾಂಕ ನಿಗದಿಪಡಿಸಿದ್ದಾರೆಂದು ತಿಳಿದುಬಂದಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಅವರ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮುಂದಿನ ವಾರದ ಆರಂಭದಲ್ಲಿ ನವದೆಹಲಿಗೆ ತೆರಳುವ ಸಾಧ್ಯತೆಯಿದೆ, ಮಂಡಳಿಗಳು ಮತ್ತು ನಿಗಮಗಳಿಗೆ ನೇಮಕಾತಿಗಳನ್ನು ಅಂತಿಮಗೊಳಿಸಲು ಪಕ್ಷದ ವರಿಷ್ಠರೊಂದಿಗೆ ಅಂತಿಮ ಸಭೆ ನಡೆಸಬಹುದು.

ಸಚಿವರಾಗಲು ಸಾಧ್ಯವಾಗದ ಶಾಸಕರನ್ನು ಸಮಾಧಾನಪಡಿಸುವ ಸಲುವಾಗಿ ಈ ವಿಳಂಬವಾದ ನೇಮಕಾತಿಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್ ಒತ್ತಡದಲ್ಲಿದೆ. ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಸುರ್ಜೇವಾಲಾ ಈಗಾಗಲೇ ಮೂರು ಬಾರಿ ಈ ಬಗ್ಗೆ ಸಭೆ ನಡೆಸಿದ್ದಾರೆ.

ಮೂಲಗಳ ಪ್ರಕಾರ, ಮೊದಲ ಕಂತಿನಲ್ಲಿ 25 ಶಾಸಕರು ಹಾಗೂ ನಾಲ್ವರು ವಿಧಾನ ಪರಿಷತ್ತಿನ ಸದಸ್ಯರಿಗೆ ಅಧಿಕಾರ ಭಾಗ್ಯ ಸಿಗುವ ಸಾಧ್ಯತೆಗಳಿದ್ದು, ಲೋಕಸಭೆ ಚುನಾವಣೆಯ ನಂತರ ಪಕ್ಷದ ಕಾರ್ಯಕರ್ತರು ಮತ್ತು ಇತರರಿಗೆ ಅವಕಾಶ ಕಲ್ಪಿಸುವ ಕುರಿತು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.

SCROLL FOR NEXT