ರಾಜಕೀಯ

ಪ್ರಹ್ಲಾದ್ ಜೋಷಿ ಸಂಸ್ಕೃತಿ ಇರುವ ಬ್ರಾಹ್ಮಣರಲ್ಲ, ಸಮಾಜವನ್ನು ಒಡೆಯುವ ಬ್ರಾಹ್ಮಣರ ಗುಂಪಿಗೆ ಸೇರಿದವರು: ಹೆಚ್ ಡಿ ಕುಮಾರಸ್ವಾಮಿ

Sumana Upadhyaya

ಬೆಂಗಳೂರು: ಜೆಡಿಎಸ್ ನ ಪಂಚರತ್ನ ರಥಯಾತ್ರೆಗೆ ನವಗ್ರಹ ರಥಯಾತ್ರೆ ಎಂದು ಹೆಸರಿಡಬೇಕೆಂದು ಬಿಜೆಪಿ ನಾಯಕ ಪ್ರಹ್ಲಾದ್ ಜೋಷಿ ನೀಡಿರುವ ಹೇಳಿಕೆಗೆ ಆಕ್ರೋಶಭರಿತರಾಗಿ ಹೆಚ್ ಡಿ ಕುಮಾರಸ್ವಾಮಿ, ಜೋಷಿಯವರ ಜಾತಿಯನ್ನು ತೆಗೆದುಕೊಂಡು ಸ್ಫೋಟಕ ಹೇಳಿಕೆ ನೀಡಿದ್ದಾರೆ. 

ಪಂಚರತ್ನ ರಥಯಾತ್ರೆಗೆ ಜನರು ನೀಡುತ್ತಿರುವ ಸ್ಪಂದನೆ ಬಿಜೆಪಿ ನಾಯಕರಲ್ಲಿ ಭಯ ಹುಟ್ಟಿಸಿದೆ. ನಮ್ಮ ಕುಟುಂಬದ ಬಗ್ಗೆ ಅವರು ಟೀಕೆ ಮಾಡಿದ್ದಾರೆ. ಮುಂದಿನ ಚುನಾವಣೆ ನಂತರ ಪ್ರಹ್ಲಾದ್ ಜೋಷಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕೆಂಬ ಹುನ್ನಾರ ಆರ್ ಎಸ್ ಎಸ್ ನಲ್ಲಿ ಪ್ರಾರಂಭವಾಗಿದೆ ಎಂದರು.

ಪ್ರಹ್ಲಾದ್ ಜೋಷಿಯವರು ದಕ್ಷಿಣ ಕರ್ನಾಟಕದ ಬ್ರಾಹ್ಮಣರ ಸಂಸ್ಕೃತಿಯವರಲ್ಲ, ಬ್ರಾಹ್ಮಣರ ವೃತ್ತಿ-ಸಂಸ್ಕಾರದಲ್ಲಿ ಎರಡು ಮೂರು ರೀತಿಗಳಿವೆ. ಇವರು ಶೃಂಗೇರಿ ಮಠದ ಪೇಷಾವರ ಗುಂಪಿನ ಬ್ರಾಹ್ಮಣರು. ಈ ಗುಂಪಿನ ಬ್ರಾಹ್ಮಣರು ಶೃಂಗೇರಿ ಮಠದ ದೇವರ ವಿಗ್ರಹವನ್ನು ಒಡೆದು ಹಾಕಿದ್ದರು. ಮಹಾತ್ಮಾ ಗಾಂಧಿಯವರನ್ನು ಕೊಂದ ವಂಶಕ್ಕೆ ಸೇರಿದವರು, ಇವರು ಹಳೆ ಕರ್ನಾಟಕ ಭಾಗದವರು ಅಲ್ಲ, ದೇಶಸ್ತ ಬ್ರಾಹ್ಮಣರ ವರ್ಗಕ್ಕೆ ಸೇರಿದವರು ಎಂದು ಪ್ರಹ್ಲಾದ್ ಜೋಷಿಯವರ ಬಗ್ಗೆ ಕುಮಾರಸ್ವಾಮಿ ಟೀಕಿಸಿದ್ದು ರಾಜ್ಯ ರಾಜಕೀಯದಲ್ಲಿ ಚುನಾವಣೆ ಹೊಸ್ತಿಲಿನಲ್ಲಿ ಬಿರುಗಾಳಿ ಎಬ್ಬಿಸಿದೆ. 

ನಮ್ಮ ಕಡೆ ಬ್ರಾಹ್ಮಣರು ಸರ್ವೇಜನ ಸುಖಿನೋ ಭವಂತು ಎನ್ನುತ್ತಾರೆ, ಹಳೆ ಕರ್ನಾಟಕ ಭಾಗದ ಬ್ರಾಹ್ಮಣರ ಕಾಲಿಗೆ ಬೀಳುತ್ತೇವೆ ನಾವು. ಆದ್ರೆ ಇವ್ರು ಹಾಗೆ ಹೇಳೋದಿಲ್ಲ. ಮಹಾರಾಷ್ಟ್ರ ಭಾಗದ ಪೇಶ್ವೆಗಳ ವಂಶಸ್ಥರಿಗೆ ಸೇರಿದವರು ಇವರು. ಅವರಿಗೆ ಸಂಸ್ಕೃತಿ ಇಲ್ಲ, ಸಂಸ್ಕೃತಿ ಬೇಕಿಲ್ಲ, ದೇಶ ಒಡೆಯೋದು, ಕುತಂತ್ರ ರಾಜಕೀಯ ಮಾಡುವುದು, ದೇಶಕ್ಕೆ ಕೊಡುಗೆ ಕೊಟ್ಟವರನ್ನು ಮಾರಣಹೋಮ ಮಾಡುವಂತದ್ದು ಅವರ ಸಂಸ್ಕೃತಿ. ಬಿಜೆಪಿಯ, ಆರ್ ಎಸ್ ಎಸ್ ನ ಹುನ್ನಾರಕ್ಕೆ ಈ ರಾಜ್ಯದ ಜನರು ಬಲಿಯಾಗಬೇಡಿ, ಎಚ್ಚರಿಕೆಯಿಂದಿರಿ, ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡಿ ಒಡೆದು ಆಳುವ ನೀತಿಯನ್ನು ಬಿಜೆಪಿ ಹೊಂದಿದೆ ಎಂದು ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಟೀಕಿಸಿದ್ದಾರೆ. 

SCROLL FOR NEXT