ರಾಜಕೀಯ

ಈ ಬಾರಿಯ ಚುನಾವಣೆ ಟಿಪ್ಪು v/s ಸಾವರ್ಕರ್ ಮಧ್ಯೆ, ಈ ದೇಶಕ್ಕೆ ಟಿಪ್ಪು ಬೇಕಾ, ಸಾವರ್ಕರ್ ಬೇಕಾ ಬನ್ನಿ ಚರ್ಚೆ ಮಾಡೋಣ ಸಿದ್ದರಾಮಣ್ಣ: ನಳಿನ್ ಕುಮಾರ್ ಕಟೀಲು

Sumana Upadhyaya

ಭಟ್ಕಳ: ಟಿಪ್ಪು-ವೀರ ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್-ಬಿಜೆಪಿ ನಾಯಕರ ಮಧ್ಯೆ ಆಗಾಗ ವಾಕ್ಸಮರ ಆಗುವುದುಂಟು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಜ್ಯದಲ್ಲಿ ಟಿಪ್ಪು ಜಯಂತಿಯನ್ನು ಆಚರಣೆಗೆ ತಂದವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ. ಟಿಪ್ಪು ವಿಷಯ ಬಂದಾಗ ಬಿಜೆಪಿ ನಾಯಕರು ಕೆಂಡಮಂಡಲವಾಗಿಬಿಡುತ್ತಾರೆ. 

ಬಿಜೆಪಿ ಸರ್ಕಾರ ಬಂದ ನಂತರ ಟಿಪ್ಪು ಜಯಂತಿ ಆಚರಣೆಯನ್ನು ತೆಗೆದುಹಾಕಲಾಯಿತು. ಇದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರನ್ನು ಕೆರಳಿಸಿದೆ. ನಾವು ಅಧಿಕಾರಕ್ಕೆ ಬಂದರೆ ಮತ್ತೆ ಟಿಪ್ಪು ಜಯಂತಿ ಆಚರಣೆ ಜಾರಿಗೆ ತರುತ್ತೇವೆ ಎನ್ನುತ್ತಾರೆ ಕಾಂಗ್ರೆಸ್ ನಾಯಕರು. ಬಿಜೆಪಿ ವೀರ ಸಾವರ್ಕರ್ ಅವರನ್ನು ಆರಾಧಿಸುತ್ತಾರೆ. 

ವಿಧಾನಸಭೆ ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಮತ್ತೆ ಆ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಈ ಚುನಾವಣೆಯನ್ನು ಟಿಪ್ಪು ವರ್ಸಸ್ ಸಾವರ್ಕರ್ ಮಧ್ಯೆ ನಡೆಯುತ್ತದೆ ಎಂದು ಕೂಡ ಹೇಳುತ್ತಾರೆ. 

ಈ ರಾಜ್ಯಕ್ಕೆ ಟಿಪ್ಪು ಜಯಂತಿ ಆಚರಣೆ ಯಾಕೆ ಬೇಕು, ದೇಶ ವಿರೋಧಿ, ಹಿಂದೂಗಳ ವಿರೋಧಿಯಾಗಿದ್ದ ಟಿಪ್ಪುವನ್ನು ಆರಾಧಿಸುವ ಅಗತ್ಯವೇನಿದೆ, ಅದರ ಬದಲು ದೇಶ ಭಕ್ತ ಸಾವರ್ಕರ್ ಅವರ ಫೋಟೋಗಳನ್ನು ಇಟ್ಟು ಪೂಜಿಸೋಣ, ಸಾವರ್ಕರ್ ಅವರು ಹಾಕಿಕೊಟ್ಟ ವಿಚಾರಧಾರೆಗಳು, ತೋರಿಸಿಕೊಟ್ಟ ಮಾರ್ಗದಂತೆ ನಡೆಯೋಣ ಎಂದು ನಿನ್ನೆ ಭಟ್ಕಳದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ನಳಿನ್ ಕುಮಾರ್ ಕಟೀಲು ರೋಷಾವೇಷವಾಗಿ ಮಾತನಾಡಿದ್ದಾರೆ. 

ಅಷ್ಟೇ ಅಲ್ಲ, ಈ ಬಾರಿಯ ಚುನಾವಣೆ ನಡೆಯುವುದು ಟಿಪ್ಪು v/s ಸಾವರ್ಕರ್ ಮಧ್ಯೆ, ಈ ದೇಶಕ್ಕೆ ಟಿಪ್ಪು ಸಂಸ್ಕೃತಿ ಬೇಕಾ, ಸಾವರ್ಕರ್ ವಿಚಾರಧಾರೆಗಳು ಬೇಕಾ, ನೋಡೇಬಿಡೋಣ, ಬನ್ನಿ ಸಿದ್ದರಾಮಯ್ಯನವರೇ ಬಹಿರಂಗ ಚರ್ಚೆ ನಡೆಸೋಣ ಎಂದು ಪಂಥಾಹ್ವಾನ ಕೂಡ ನೀಡಿದ್ದಾರೆ. 

SCROLL FOR NEXT