ರಾಜಕೀಯ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ: ಸುರ್ಜೇವಾಲಾ

Manjula VN

ವಿಜಯಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದೇ ಆದರೆ, ಬಿಜೆಪಿ ಹಗರಣಗಳ ಬಗ್ಗೆ ಕಾಂಗ್ರೆಸ್ ತನಿಖೆ ನಡೆಸಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಶನಿವಾರ ಹೇಳಿದರು.

ಪಕ್ಷದ ಮಹತ್ವಾಕಾಂಕ್ಷೆಯ ‘ಗ್ಯಾರೆಂಟಿ ಕಾರ್ಡ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು,  ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧದ ಗಂಭೀರ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದರೂ, ಪ್ರಧಾನಿ ಮೋದಿ ಬಾಯಿ ಬಿಡುತ್ತಿಲ್ಲ. ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲಾಗುವುದು ಎಂದು ಹೇಳಿದರು.

'ಪ್ರಧಾನಿ ಮೋದಿ ಏಳು ಬಾರಿ ಕರ್ನಾಟಕಕ್ಕೆ ಭೇಟಿ ನೀಡಿದ್ದರು, ಆದರೆ ಬೊಮ್ಮಾಯಿ ಸರ್ಕಾರ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪದ ಬಗ್ಗೆ ಬಾಯಿ ಬಿಡಲಿಲ್ಲ. ಬೊಮ್ಮಾಯಿ ಸರ್ಕಾರವು ಪಿಎಸ್ಐ ನೇಮಕಾತಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ವಿಷಯ ಎಷ್ಟು ಗಂಭೀರವಾಗಿದೆ ಎಂದರೆ, ಈ ಪ್ರಕರಣದಲ್ಲಿ ಒಬ್ಬ ಡಿಜಿಪಿ ಕೂಡ ಭಾಗಿಯಾಗಿರುವುದು ಕಂಡು ಬಂದಿದೆ. ಇದೀಗ ಅವರು ಕಂಬಿ ಹಿಂದೆ ಇದ್ದಾರೆ.

"ಕಾಂಗ್ರೆಸ್ ಮೊದಲು ಈ ವಿಷಯವನ್ನು ಪ್ರಸ್ತಾಪಿಸಿದಾಗ, ಬೊಮ್ಮಾಯಿ ಸರ್ಕಾರ ಒಪ್ಪಿಕೊಳ್ಳಲಿಲ್ಲ. ಆದರೆ, ಭ್ರಷ್ಟಾಚಾರ ನಡೆದಿರುವುದು ಸತ್ಯ. ಉನ್ನತ ಐಪಿಎಸ್ ಅಧಿಕಾರಿಗಳು ಅದರಲ್ಲಿ ಭಾಗಿಯಾಗಿದ್ದಾರೆ. ಗೃಹ ಸಚಿವರ ಅಡಿಯಲ್ಲೇ ಇದೆಲ್ಲವೂ ನಡೆಯುತ್ತಿದೆ. ಆದರೆ, ಅವರ ವಿರುದ್ಧ ಪಕ್ಷ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಅದೇ ರೀತಿ ಜೂನಿಯರ್ ಇಂಜಿನಿಯರ್, ಉಪನ್ಯಾಸಕರ ನೇಮಕಾತಿಯಲ್ಲೂ ಹಗರಣಗಳು ವರದಿಯಾಗಿವೆ. "ಈ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳು ವರದಿಯಾಗುತ್ತಿವೆ. ಅವುಗಳು ಬಹಿರಂಗಗೊಂಡಿವೆ, ಆದರೂ ಪ್ರಧಾನಿ ಮತ್ತು ಸಿಎಂ ಇಂತಹ ಆರೋಪಗಳ ಬಗ್ಗೆ ಮೌನ ವಹಿಸುತ್ತಿದ್ದಾರೆಂದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಿಜೆಪಿ ಸರ್ಕಾರದ ವಿರುದ್ಧ ಮಾಡಿರುವ ಎಲ್ಲಾ ಭ್ರಷ್ಟಾಚಾರ ಆರೋಪಗಳ ಬಗ್ಗೆ ತನಿಖೆಗೆ ತಮ್ಮ ಪಕ್ಷ ಆದೇಶಿಸುತ್ತದೆ. ಬಿಜೆಪಿ ಸರ್ಕಾರದ ಅಂತಿಮ ದಿನಗಳು ಎಣಿಕೆಯಾಗುತ್ತಿವೆ. ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದರು.

ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ಕುರಿತು ಸ್ಪಷ್ಟನೆ ನೀಡಿದ ಅವರು, ಪಕ್ಷದಿಂದ ಒಬ್ಬರಿಗೆ ಮಾತ್ರ ಒಂದು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗುತ್ತದೆ ಎಂದು ತಿಳಿಸಿದರು.

SCROLL FOR NEXT