ರಾಜಕೀಯ

ವಿರೋಧ ಪಕ್ಷದವರಿಗೆ ನಮ್ಮ ಮೇಲೆ ಹೊಟ್ಟೆಕಿಚ್ಚು: ಸಿಎಂ ಬೊಮ್ಮಾಯಿ

Manjula VN

ಕಲಬುರಗಿ: ವಿರೋಧ ಪಕ್ಷಗಳ ನಾಯಕರ ಟೀಕೆಗಳಿಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ, ಅವರು ಕೇವಲ ಅಸೂಯೆಯಿಂದ ನಮ್ಮನ್ನು ಟೀಕಿಸುತ್ತಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾನುವಾರ ಹೇಳಿದರು.

ಕಲಬುರಗಿಯಲ್ಲಿ ನಡೆಯುತ್ತಿರುವ 3 ದಿನಗಳ ಕಲ್ಯಾಣ ಕರ್ನಾಟಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬೊಮ್ಮಾಯಿ, ವಿರೋಧ ಪಕ್ಷಗಳ ಟೀಕೆಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ತೆಗೆದುಕೊಳ್ಳುತ್ತೇನೆಂದು ಹೇಳಿದರು.

ರಾಜ್ಯದ ಇತರ ಭಾಗಗಳು ಗಮನಾರ್ಹ ಅಭಿವೃದ್ಧಿ ಸಾಧಿಸಿದೆ, ಆದರೆ, ಕಲ್ಯಾಣ ಕರ್ನಾಟಕ ಪ್ರದೇಶ ಮಾತ್ರ ಹಿಂದುಳಿದಿದೆ. ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಆಡಳಿತ ನಡೆಸಿದರೂ, ಈ ಭಾಗದ ನಾಯಕರು ಸರ್ಕಾರದ ಉನ್ನತ ಸ್ಥಾನಗಳಲ್ಲಿದ್ದರೂ ಈ ಭಾಗ ಅಭಿವೃದ್ಧಿ ಕಾಣಲಿಲ್ಲ. 371 ಜೆ ಕಲಂ ತಿದ್ದುಪಡಿಯನ್ನು 8 ವರ್ಷಗಳ ಹಿಂದೆ ತರಲಾಗಿದ್ದರೂ, ನಿರೀಕ್ಷಿತ ಅಭಿವೃದ್ಧಿಯನ್ನು ಅಂದಿನ ಸರ್ಕಾರ ತರಲಿಲ್ಲ, ಅಭಿವೃದ್ಧಿ ಬದ್ಧತೆ ಕೊರತೆಯೇ ಇದಕ್ಕೆ ಕಾರಣವಾಗಿದೆ.

ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದೆ. ಬಿ ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ ನಂತರ ಕಲಬುರಗಿಯಲ್ಲಿ ವಿಮಾನ ನಿಲ್ದಾಣವನ್ನು ತಂದರು. ಬೀದರ್-ಕಲಬುರಗಿ ನಡುವೆ ರೈಲು ಸಂಚಾರ ಆರಂಭವಾಗಿದ್ದು ಯಡಿಯೂರಪ್ಪ ಅವರ ಅವಧಿಯಲ್ಲಿ. ಹೈದರಾಬಾದ್ ಕರ್ನಾಟಕ ಪ್ರದೇಶವನ್ನು ಕಲ್ಯಾಣ ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಎಂದು ತಿಳಿಸಿದರು.

ನಾನು ಮುಖ್ಯಮಂತ್ರಿಯಾದ ನಂತರ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ (ಕೆಕೆಆರ್‌ಡಿಬಿ) ಕಳೆದ ವರ್ಷ 1,500 ಕೋಟಿ ರೂ.ಗಳಿಂದ 3000 ಕೋಟಿ ರೂ.ಗೆ ಅನುದಾನವನ್ನು ಹೆಚ್ಚಿಸಿದೆ, ಈ ಅನುದಾನದಲ್ಲಿ 1,500 ಕಾಮಗಾರಿಗಳು ಪ್ರಗತಿಯಲ್ಲಿವೆ. "ಈ ವರ್ಷ, ನಾನು ಕೆಕೆಆರ್‌ಡಿಬಿಗೆ 5,000 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದೇನೆ" ಎಂದರು.

ಈ ಭಾಗದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಈ ವರ್ಷ 1,100 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, 2023-24ರಲ್ಲಿ ಇನ್ನೂ 1,000 ತರಗತಿ ಕೊಠಡಿಗಳನ್ನು ನಿರ್ಮಿಸಲಾಗುವುದು. ಈ ವರ್ಷ 21 ಪಿಎಚ್‌ಸಿ ಮಂಜೂರಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಧ್ಯಮ ಮತ್ತು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹಾಗೂ ಕಲಬುರಗಿ ಜಿಲ್ಲಾ ಸಚಿವರು ಮಾತನಾಡಿದರು.

SCROLL FOR NEXT