ರಾಜಕೀಯ

ಕುಮಾರಸ್ವಾಮಿ ತಾನು ಕನ್ನಡದ 'ಕಟ್ಟಾಳು' ಎಂಬ ಹುಂಬತನದ ಭ್ರಮಾಲೋಕದಿಂದ ವಾಸ್ತವಕ್ಕೆ ಬರಬೇಕು: ಬಿಜೆಪಿ ಕಿಡಿ

Nagaraja AB

ಬೆಂಗಳೂರು: "ನಂದಿನಿ" ವಿಲೀನದ ಬಗ್ಗೆ ಯಾರೂ ಏನು ಹೇಳದಿದ್ದರೂ, ಯಾವತ್ತೂ ಇಲ್ಲದ ಕನ್ನಡ ಪ್ರೇಮ ತೋರಿಸಲು ಎಚ್ ಡಿ ಕುಮಾರಸ್ವಾಮಿ ಸುಳ್ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸದಾ ಕಾಲ ಸದಾರಮೆ ನಾಟಕವಾಡುವ  ಕುಮಾರಸ್ವಾಮಿ  ಕನ್ನಡಿಗರ ಬಗ್ಗೆ ಎಷ್ಟು ಕಾಳಜಿ ತೋರಿದ್ದಾರೆ ಅನ್ನೋದು ಎಲ್ಲರಿಗೂ ಅರಿವಿದೆ; ಮಂಡ್ಯದ ಜನತೆಯಂತೂ ಇದಕ್ಕೆ ಖುದ್ದು ಸಾಕ್ಷಿ. ಹಾಸನದಲ್ಲಿ ಅಣ್ಣ, ಮಂಡ್ಯದಲ್ಲಿ ಮಗ, ರಾಮನಗರದಲ್ಲಿ ಖುದ್ದು ದಂಪತಿಗಳು ಕೋಟೆ ಕಟ್ಟಿ ಮೆರೆಯುವ ಹುನ್ನಾರದಲ್ಲಿ, ಕಾರ್ಯಕರ್ತರಿಗೆ ಕ್ಯಾ-ರೇ ಎನ್ನದಿರುವುದು, ಹೆಗಲು ಕೊಟ್ಟ ಕಾರ್ಯಕರ್ತರಿಗೆ ಕೈ ಕೊಟ್ಟಿದ್ದು ಎಲ್ಲವನ್ನು ಜನ ಕಂಡಿದ್ದಾರೆ. ಮಂಡ್ಯ, ರಾಮನಗರದ ಅವರದೆ ಪಕ್ಷದ ಕಾರ್ಯಕರ್ತರು ಕುಮಾರಸ್ವಾಮಿಗೆ ಕನ್ನಡಿಗರಂತೆ ತೋರುವುದಿಲ್ಲವೇ?ಎಂದು ಪ್ರಶ್ನಿಸಿದೆ. 

ಮನ್ ಮುಲ್ ನಲ್ಲಿ ಜೆಡಿಎಸ್   ನಾಯಕರದ್ದೇ ಕಾರುಬಾರಂತೆ! ಅಲ್ಲಿ ತಾಂಡವವಾಡುತ್ತಿರುವ ಅವ್ಯವಹಾರಗಳ ಬಗ್ಗೆ ಕುಮಾರಸ್ವಾಮಿ ದಿವ್ಯ ಮೌನ ವಹಿಸಿದ್ದಾರೆ. ಮೈಶುಗರ್ ಸಕ್ಕರೆ ಕಾರ್ಖಾನೆಗೆ ಬೀಗ ಜಡಿದು ಮಂಡ್ಯದ ಲಕ್ಷಾಂತರ ಜನರ ಹೊಟ್ಟೆಯ ಮೇಲೆ ಹೊಡೆದವರು ಕುಮಾರಸ್ವಾಮಿ ಅಲ್ಲವೇ ಎಂದು ಪ್ರಶ್ನಿಸಿದ್ದು, 2019ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ, ಮಂಡ್ಯದಲ್ಲಿ ಸೋಲುವ ಮುನ್ನ ಚುನಾವಣಾ ಗಿಮಿಕ್ ಆಗಿ ಘೋಷಿಸಿದ್ದ 8,000 ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳು ಮಂಡ್ಯದ ಜನರ ದಿಕ್ಕುತಪಿಸಲು ನೀರಿನ ಮೇಲೆ ಗೀಚಿದ ಅಕ್ಷರಗಳು. ಇದು ಸ್ವಾಭಿಮಾನಿ ಮಂಡ್ಯದ ಕನ್ನಡಿಗರಿಗೆ ಕುಮಾರಸ್ವಾಮಿ ಮಾಡಿದ ಅವಮಾನ ಎಂದು ಆಕ್ರೋಶ ವ್ಯಕ್ತಪಡಿಸಿದೆ. 

ಬಿಜೆಪಿ ರಾಮನಗರಕ್ಕೆ ವಿಶ್ವದರ್ಜೆಯ ರೇಷ್ಮೆ ಮಾರುಕಟ್ಟೆ, ಮಾಗಡಿಯಲ್ಲಿ ಕರ್ನಾಟಕ ಸಂಸ್ಕೃತ ವಿವಿಯ ಹೊಸ ಆವರಣ ಕೊಟ್ಟಿದೆ.  ರಾಮನಗರವನ್ನು ಸ್ವಂತ ರಾಜಕೀಯ ಲಾಭಕ್ಕಾಗಿ ಜಿಲ್ಲೆಯಂದು ಘೋಷಿಸಿ ಬಿಡದಿಯಲ್ಲಿ ಐಷಾರಾಮಿ ಜೀವನ ಸಾಗಿಸುತ್ತ, ಸ್ವತಃ ದಂಪತಿಗಳೇ ಶಾಸಕರಾಗಿದ್ದಾರೆ ಹೊರತಾಗಿ ಜಿಲ್ಲೆಗೆ ಬೇರೇನು ಮಾಡಿದ್ದೀರಿ? ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆ ಮಾದರಿಯಂತೆ ಶ್ರೀ ರಾಮಚಂದ್ರನ ದೇವಸ್ಥಾನವನ್ನು ನಿರ್ಮಿಸಲಿದೆ. ಮಾಗಡಿ ಕೆಂಪಾಪುರದಲ್ಲಿ ಕೆಂಪೇಗೌಡರ ಸ್ಮಾರಕ, ಮಾಗಡಿ ವೀರಾಪುರದಲ್ಲಿ ಶ್ರೀ ಶ್ರೀ ಶಿವಕುಮಾರ ಸ್ವಾಮೀಜಿಯವರ ಸ್ಮಾರಕ ಮತ್ತು ಮಾಗಡಿ ಬಾನಂದೂರಿನಲ್ಲಿ ಬಾಲಗಂಗಾಧರನಾಥ ಸ್ವಾಮೀಜಿಯವರ ಸ್ಮಾರಕ ನಿರ್ಮಿಸಲಿದೆ.

ಈ ಮಹನೀಯರನ್ನು ಎಂದಿಗೂ ನೆನೆಯದೆ, ಕನ್ನಡ ದ್ವೇಷಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ವಿಶ್ವವಿದ್ಯಾಲಯ ತೆರಿಯಲಿದ್ದೇವೆ ಎಂದು ಘೋಷಿಸುವ ಮೂಲಕ ಕನ್ನಡ ಕುಲ ಕೋಟಿಯ ಭಾವನೆಗಳಿಗೆ ಧಕ್ಕೆ ತಂದಿದ್ದೀರಿ. ಇಷ್ಟೆಲ್ಲಾ ಹಳವಂಡ ಮಾಡಿಕೊಂಡಿರುವ ಕುಮಾರಸ್ವಾಮಿ ಕಟ್ಟಾಳು ಎಂಬ ಹುಂಬತನದ ಭ್ರಮಾಲೋಕದಿಂದ ವಾಸ್ತವಕ್ಕೆ ಬರಬೇಕು. 

SCROLL FOR NEXT