ಹುಬ್ಬಳ್ಳಿ: ಸಂಸದೆ ಸುಮಲತಾ ಬಿಜೆಪಿ ಅಸೋಸಿಯೇಟ್ ಮೆಂಬರ್ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವ್ಯಂಗ್ಯವಾಡಿದ್ದಾರೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರದ್ದು ಸುಳ್ಳಿನ ಯುನಿವರ್ಸಿಟಿ. ರಾಜ್ಯದಲ್ಲಿ 26 ಸಂಸದರು ಬಿಜೆಪಿಯವರಿದ್ದಾರೆ. ಸುಮಲತಾ ಕೂಡಾ ಬಿಜೆಪಿ ಅಸೋಸಿಯೇಟ್ ಮೆಂಬರೂ ಆದರೂ, ಮಹದಾಯಿಗೆ ಇವರೆಲ್ಲ ಸೇರಿ ಪ್ರಧಾನಮಂತ್ರಿಗಳ ಬಳಿ ಒಮ್ಮೆಯೂ ಮಾತನಾಡಿಲ್ಲ. ನೀರು ಹರಿಸುವ ಮುನ್ನ ಮೂಲಭೂತ ಕಾಮಗಾರಿಯನ್ನಾದರೂ ಪೂರ್ಣಗೊಳಿಸಬಹುದಿತ್ತು ಎಂದರು.
ರಾಜ್ಯ , ಗೋವಾ, ಕೇಂದ್ರದಲ್ಲಿ ತನ್ನದೆಯಾದ ಬಿಜೆಪಿ ಸರ್ಕಾರವಿದ್ದರೂ ಮೂರು ವರ್ಷದಿಂದ ಮಹದಾಯಿ ಯೋಜನೆ ಜಾರಿಗೊಳಿಸಲು ಆಗಿಲ್ಲ. ಈಗ ನಾವು ಜನರ ಧ್ವನಿ ಎತ್ತಿದಾಗ ಹೆದರಿ ಡಿಪಿಆರ್ ಗೆ ಅನುಮತಿ ಪಡೆದುಕೊಂಡು ಬಂದಿದ್ದಾರೆ ಎಂದು ಡಿಕೆ ಶಿವ ಕುಮಾರ್ ಆರೋಪಿಸಿದರು.
ಇದನ್ನೂ ಓದಿ: ಬಿಜೆಪಿ ಫ್ಲೆಕ್ಸ್ನಲ್ಲಿ ರಾರಾಜಿಸುತ್ತಿರುವ 'ಸ್ವಾಭಿಮಾನಿ' ಸಂಸದೆ: ಕಮಲ ಪಾಳಯ ಸೇರುವ ಸುಳಿವು ನೀಡಿದ್ರಾ ಸುಮಲತಾ ಅಂಬರೀಷ್?
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಎಷ್ಟೊಂದು ಅಪ್ ಡೇಟೆಡ್ ಇದ್ದಾರೆ ಅನ್ನೋದು ಪತ್ರ ಓದಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಅನುಮತಿ ನೀಡಿದ ಪತ್ರದಲ್ಲಿ ಕಂಡಿಷನ್ ಹಾಕಿದ್ದಾರೆ. ನಾವು ಅದನ್ನು ಸರಿಯಾಗಿ ನೋಡಿಕೊಂಡಿದ್ದೇವೆ. ನಾವೆಲ್ಲ ಸತ್ತ ಮೇಲೆ ಸುಪ್ರೀಂಕೋರ್ಟ್ ತೀರ್ಪು ಬರುತ್ತಾ? ನಮಗೆ ಅಧಿಕಾರ ಕೊಡಿ, ಆರು ತಿಂಗಳಲ್ಲಿ ಆ ಯೋಜನೆ ಜಾರಿಗೊಳಿಸುತ್ತೇವೆ ಎಂದರು.
ಪಂಚಮಸಾಲಿ, ಒಕ್ಕಲಿಗ ಸಮುದಾಯಗಳ ಮೀಸಲಾತಿ ವಿಚಾರ ಕುರಿತು ಮಾತನಾಡಿದ ಡಿಕೆಶಿವಕುಮಾರ್,ಸರ್ಕಾರ ಮೂಗಿಗಲ್ಲ, ತಲೆಗೆ ತುಪ್ಪ ಸವರಿದೆ. ಮೂಗಿಗೆ ಸವರಿದ್ದರೆ ಕನಿಷ್ಟಪಕ್ಷ ವಾಸನೆಯನ್ನಾದ್ರೂ ನೋಡಬಹುದಿತ್ತು. ಬೊಮ್ಮಾಯಿ ಸರ್ಕಾರ ತಲೆಗೆ ತಪ್ಪು ಸವರಿದೆ. ಅದನ್ನು ಹೇಗೆ ತಿನ್ನೋದು ಜಯಮೃತ್ಯುಂಜಯ ಸ್ವಾಮೀಜಿ ಸರಿಯಾಗಿ ಹೇಳಿದ್ದಾರೆ. ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸರ್ಕಾರಕ್ಕೆ ಟಾಂಗ್ ನೀಡಿದರು.