ರಾಜಕೀಯ

ವಿಧಾನಸಭೆ ಚುನಾವಣೆಗೂ ಮುನ್ನ ಕೊಡಗು ಜೆಡಿಎಸ್‌ನಲ್ಲಿ ಭಿನ್ನಮತ ಸ್ಫೋಟ

Lingaraj Badiger

ಮಡಿಕೇರಿ: ಕೊಡಗು ಜೆಡಿಎಸ್ ಪಕ್ಷದಲ್ಲಿ ಭಿನ್ನಾಭಿಪ್ರಾಯ ಸ್ಫೋಟಗೊಂಡಿದ್ದು, ಜೆಡಿಎಸ್ ಯುವ ಮುಖಂಡ ಹಾಗೂ ಸಂಸದ ಪ್ರಜ್ವಲ್ ರೇವಣ್ಣ ಅವರು ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. 

ಯುವವಾಹಿನಿಯ ಸಭೆಯ ನೇತೃತ್ವ ವಹಿಸಲು ಪ್ರಜ್ವಲ್ ರೇವಣ್ಣ ಅವರು ಮಂಗಳವಾರ ಸೋಮವಾರಪೇಟೆಗೆ ಭೇಟಿ ನೀಡಿದ್ದು, ಈ ವೇಳೆ ಭಿನ್ನಮತ ಶಮನಗೊಳಿಸಲು ಯತ್ನಿಸಿದರು.

ಇತ್ತೀಚಿಗೆ ಜಿಲ್ಲೆಯ ಹಿರಿಯ ಜೆಡಿಎಸ್ ಮುಖಂಡ ನಾಪಂಡ ಮುತ್ತಪ್ಪ ಅವರು ಮುಂಬರುವ ವಿಧಾಸಭೆ ಚುನಾವಣೆಯಲ್ಲಿ ಮಡಿಕೇರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ತಾವು ಸ್ಪರ್ಧಿಸುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದರು. ಇದರಿಂದ ಅಸಮಾಧಾನಗೊಂಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆಎಂಬಿ ಗಣೇಶ್‌ ಅವರು, ಜೆಡಿಎಸ್ ಅಭ್ಯರ್ಥಿಯಾಗಿ ಮುತ್ತಪ್ಪ ಅವರ “ಸ್ವಯಂ ಘೋಷಣೆ” ಕುರಿತು ಸ್ಪಷ್ಟೀಕರಣ ಕೋರಿ ನೋಟಿಸ್ ನೀಡಿದ್ದಾರೆ.

ಗಣೇಶ್ ಅವರು ಉಮೇದುವಾರಿಕೆ ಘೋಷಣೆ ಹಾಗೂ ಚುನಾವಣಾ ಪ್ರಚಾರ ಆರಂಭಿಸಿರುವ ಕುರಿತು ವಿವರಣೆ ಕೋರಿ ಮುತ್ತಪ್ಪ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. 

ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ ಗಣೇಶ್, ಜೆಡಿಎಸ್ ಹೈಕಮಾಂಡ್ ಇನ್ನೂ ಉಮೇದುವಾರಿಕೆ ಪಟ್ಟಿಯನ್ನು ಬಿಡುಗಡೆ ಮಾಡದ ಕಾರಣ ಮುತ್ತಪ್ಪ ಅವರು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದರು.

ಉಮೇದುವಾರಿಕೆ ‘ಸ್ವಯಂ ಘೋಷಣೆ’ ಪಕ್ಷದೊಳಗೆ ಆಂತರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ ಎಂದು ಗಣೇಶ್ ಅವರು ತಾವು ನೀಡಿದ ನೋಟಿಸ್‌ನಲ್ಲಿ ತಿಳಿಸಿದ್ದಾರೆ ಮತ್ತು ಏಳು ದಿನಗಳಲ್ಲಿ ಸ್ಪಷ್ಟನೆ ನೀಡಬೇಕು ಎಂದು ಸೂಚಿಸಿದ್ದಾರೆ.

ಸೋಮವಾರಪೇಟೆಯಲ್ಲಿ ಇಂದು ನಡೆದ ಜೆಡಿಎಸ್ ಯುವ ಘಟಕದ ಸಮಾವೇಶದ ನೇತೃತ್ವ ವಹಿಸಿದ್ದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ, ಜಿಲ್ಲಾಧ್ಯಕ್ಷ ಕೆಎಂಬಿ ಗಣೇಶ್ ವಿರುದ್ಧ ಕಿಡಿ ಕಾರಿದ್ದಾರೆ. ಈ ಸಭೆಗೆ ಗಣೇಶ್ ಹಾಜರಾಗದಿದ್ದರೂ, ಗಣೇಶ್ ಅವರು ಮುತ್ತಪ್ಪ ಅವರಿಗೆ ನೋಟಿಸ್ ನೀಡಿರುವ ರೀತಿಯನ್ನು ಪ್ರಜ್ವಲ್ ಪ್ರಶ್ನಿಸಿದ್ದಾರೆ. ಪಕ್ಷದೊಳಗೇ ಇತ್ಯರ್ಥಪಡಿಸುವ ಬದಲು ಈ ವಿಚಾರವನ್ನು ಸಾರ್ವಜನಿಕಗೊಳಿಸಿದ್ದಕ್ಕೆ ಗಣೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಭೆಯಲ್ಲಿ ಜೆಡಿಎಸ್ ಟಿಕೆಟ್ ಆಕಾಂಕ್ಷಿ ನಾಪಂಡ ಮುತ್ತಪ್ಪ ಉಪಸ್ಥಿತರಿದ್ದರು. ಈ ವಿಚಾರವಾಗಿ ಚರ್ಚಿಸಲು ಪ್ರಜ್ವಲ್ ಜಿಲ್ಲೆಯ ಎರಡೂ ನಾಯಕರನ್ನು ರೆಸಾರ್ಟ್ ಗೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT