ರಾಜಕೀಯ

ದತ್ತಪೀಠ, ಅಯೋಧ್ಯೆ ಬಗ್ಗೆ ವಿವಾದಾತ್ಮಕ ಹೇಳಿಕೆಗೆ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ ಕ್ಷಮೆಯಾಚನೆ

Lingaraj Badiger

ಬೆಂಗಳೂರು: ದತ್ತಪೀಠ, ದತ್ತಮಾಲೆ ಮತ್ತು ಅಯೋಧ್ಯೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಶೃಂಗೇರಿ ಕಾಂಗ್ರೆಸ್ ಶಾಸಕ ಟಿಡಿ ರಾಜೇಗೌಡ ಬುಧವಾರ ಕ್ಷಮೆಯಾಚಿಸಿದ್ದಾರೆ.

ಕುಟುಂಬ ಸಮೇತ ಶಿರಡಿ ಸಾಯಿಬಾಬಾ ದರ್ಶನಕ್ಕೆ ತೆರಳಿರುವ ಶಾಸಕ ರಾಜೇಗೌಡ ಅವರು ಅಲ್ಲಿಂದಲೇ ಒಂದು ವಿಡಿಯೋ ಬಿಡುಗಡೆ ಮಾಡಿ ತಮ್ಮ ಹೇಳಿಕೆಗಳಿಗೆ ಕ್ಷಮೆ ಯಾಚಿಸಿದ್ದಾರೆ.

ವಿಡಿಯೋದಲ್ಲಿ "ನಾನು ನನ್ನ ಕುಟುಂಬದೊಂದಿಗೆ ಶಿರಡಿಗೆ ಬಂದಿದ್ದೇನೆ. ನನ್ನ ಹೇಳಿಕೆಗಳಿಂದ ಗೊಂದಲ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ. ಈ ಗೊಂದಲವನ್ನು ನಿವಾರಿಸಲು ನಾನು ಈ ಹೇಳಿಕೆ ನೀಡುತ್ತಿದ್ದೇನೆ" ಎಂದು ರಾಜೇಗೌಡ ಹೇಳಿದ್ದಾರೆ.

ಕೆಲ ದಿನಗಳ ಹಿಂದೆ ದಲಿತ ವಿದ್ಯಾರ್ಥಿ ಶಾಲು ಹಾಕಿಕೊಳ್ಳಲಿಲ್ಲ. ಮೆರವಣಿಗೆಯಲ್ಲಿ ಭಾಗವಹಿಸಲಿಲ್ಲ ಎಂಬ ಕಾರಣಕ್ಕೆ ಆತನಿಗೆ ಥಳಿಸಿರುವ ಪ್ರಕರಣ ಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಹಲ್ಲೆ ತಡೆಯಲು ಯತ್ನಿಸಿದ ಬ್ರಾಹ್ಮಣ ಯುವಕನ ಮೇಲೂ ಹಲ್ಲೆ ನಡೆಸಲಾಗಿದ್ದು, ಈ ಸಂಬಂಧ ಪ್ರಕರಣ ದಾಖಲಾಗಿದೆ. ಹಲ್ಲೆ ವಿಷಯವಾಗಿ ಬುದ್ದಿಹೇಳುವ ಕೆಲಸವನ್ನು ಮಾಡಿದ್ದೇನೆ ಎಂದಿದ್ದಾರೆ.

''ಕ್ಷೇತ್ರದಲ್ಲಿ ಕೇಸು, ಕೌಂಟರ್ ಕೇಸ್ ಹಾಕುವುದು ಮಾಮೂಲಿಯಾಗಿದೆ, ನನ್ನ ವಿರುದ್ಧ ಆರೋಪ ಮಾಡಿ ಅಭಿವದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆ, ಕಿರುಕುಳ ನೀಡಿದ್ದರಿಂದ ಆಕ್ರೋಶಗೊಂಡು ನಾನೂ ಮಾತನಾಡಿದ್ದೇನೆ. ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಬಳಸುವ ಭಾಷೆಯನ್ನು ಬಳಸಿದ್ದೇನೆ. ಆ ಪದ ಬಳಸುವುದು ಯಾರ ಸಂಸ್ಕೃತಿಯೂ ಆಗಬಾರದು. ಆ ಪದ ಬಳಸಿದ್ದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

ದತ್ತಪೀಠ ಮತ್ತು ಅಯೋಧ್ಯೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಕಾಂಗ್ರೆಸ್ ಶಾಸಕರ ವಿರುದ್ಧ ತೀವ್ರ ಅಕ್ರೋಷ ವ್ಯಕ್ತಪಡಿಸಿದ್ದ ಹಿಂದೂಪರ ಸಂಘಟನೆಗಳು ಶಾಸಕರು ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದವು.

ಮನೆ ಹಾಳು ಮಕ್ಕಳು ಜನರಿಗೆ ದತ್ತಮಾಲೆ ಹಾಕಿಸಿ, ಕುಂಕುಮವನ್ನು ಹಾಕಿ ಕರೆದುಕೊಂಡು ಹೋಗುತ್ತಾರೆ. ಅಯೋಧ್ಯೆ ಹೋರಾಟದಲ್ಲಿ ಲಕ್ಷಾಂತರ ಜನರನ್ನು ಬಲಿ ಕೊಟ್ಟರು. ಬಾಬ್ರಿ ಮಸೀದಿ ಕೆಡವಲು ಹೋಗಿ ಲಕ್ಷಾಂತರ ಜನರು ಬಲಿಯಾದ್ರು. ನಾನು ಬೈಯುತ್ತೇನೆ, ಜನರನ್ನ ಕರೆದುಕೊಂಡು ಹೋಗುವವರು ಮನೆಹಾಳರು ಎಂದು ಶಾಸಕ ಟಿಡಿ ರಾಜೇಗೌಡರ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು.

SCROLL FOR NEXT