ಬೆಂಗಳೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(D K Shivakumar) ಅವರು ನಿನ್ನೆ ಶುಕ್ರವಾರ ದೆಹಲಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ್ದು, ಈ ವರ್ಷಾಂತ್ಯದಲ್ಲಿ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯ ಕುರಿತು ಇಬ್ಬರೂ ಚರ್ಚಿಸಿದ್ದಾರೆ ಎಂಬ ವದಂತಿಗಳು ದಟ್ಟವಾಗಿದೆ.
ಆಂಧ್ರಪ್ರದೇಶದ ಮಾಜಿ ಸಿಎಂ ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿಯಾಗಿರುವ ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷದ (YSRTP) ಮುಖ್ಯಸ್ಥೆ ವೈಎಸ್ ಶರ್ಮಿಳಾ ರೆಡ್ಡಿ ಕಾಂಗ್ರೆಸ್ ಸೇರುವಲ್ಲಿ ಅವರ ಪಾತ್ರದ ಕುರಿತು, ನಿನ್ನೆ ದೆಹಲಿಯಲ್ಲಿ ಸುದ್ದಿಗಾರರು ಪ್ರಶ್ನೆ ಕೇಳಿದಾಗ ಪ್ರತಿಕ್ರಿಯೆ ಶಿವಕುಮಾರ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ನಾನು ಅದರ ಬಗ್ಗೆ ಮಾತನಾಡುವುದಿಲ್ಲ, ಅವರ ಕುಟುಂಬದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ಶರ್ಮಿಳಾ ರೆಡ್ಡಿ ಮತ್ತು ನಾನು ಒಟ್ಟಿಗೆ ರಾಜಕೀಯ ಪ್ರವೇಶ ಮಾಡಿ ಈ ಹಂತಕ್ಕೆ ಬಂದವರು ಇಬ್ಬರೂ ಪರಸ್ಪರ ಗೌರವವನ್ನು ಹೊಂದಿದ್ದೇವೆ ಎಂದು ಅವರು ಹೇಳಿದರು.
ನನಗೆ ಹಿಂದಿ ಗೊತ್ತಿಲ್ಲ: ರಾಷ್ಟ್ರ ರಾಜಕಾರಣಕ್ಕೆ ಬರುವ ಆಸಕ್ತಿಯಿದೆಯೇ ಎಂದು ಸುದ್ದಿಗಾರರು ಕೇಳಿದ್ದಕ್ಕೆ ನನಗೆ ಹಿಂದಿ ಗೊತ್ತಿಲ್ಲದ ಕಾರಣ ರಾಷ್ಟ್ರ ರಾಜಕಾರಣಕ್ಕೆ ಪ್ರವೇಶಿಸುವುದಿಲ್ಲ ಎಂದು ಡಿಕೆಶಿ ಹಾಸ್ಯಚಟಾಕಿ ಹಾರಿಸಿಬಿಟ್ಟರು.
ಕೆಪಿಸಿಸಿ ಅಧ್ಯಕ್ಷರಾಗಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿಗೆ ಕಾರಣರಾದ ಶಿವಕುಮಾರ್ ಅವರ ಅನುಭವವನ್ನು ತೆಲಂಗಾಣದಲ್ಲಿ ಬಳಸಲು ಪಕ್ಷದ ಹೈಕಮಾಂಡ್ ಬಯಸಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.