ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೇ ಜುಲೈ 7ರಂದು ಮಂಡಿಸಲಿರುವ ನೂತನ ಕಾಂಗ್ರೆಸ್ ಸರ್ಕಾರದ ಬಜೆಟ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಕಾಂಗ್ರೆಸ್ ನ ಐದು ಗ್ಯಾರಂಟಿಗಳ ಅನುಷ್ಠಾನಕ್ಕೆ ಸರ್ಕಾರ ಹೇಗೆ ಸಂಪನ್ಮೂಲಗಳನ್ನು ಕ್ರೋಢೀಕರಿಸುತ್ತದೆ, ಹೆಚ್ಚುವರಿ ಅನುದಾನವನ್ನು ಯಾವ ರೀತಿ ಬಿಡುಗಡೆ ಮಾಡುತ್ತದೆ ಎಂಬುದೇ ಎಲ್ಲರ ಕುತೂಹಲ.
ಕಾಂಗ್ರೆಸ್ ಸರ್ಕಾರ ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಜಾರಿಗೆ ತರಲು ವರ್ಷಕ್ಕೆ 59 ಸಾವಿರ ಕೋಟಿ ರೂಪಾಯಿ ಅನುದಾನ ಮೀಸಲಿಡಬೇಕಾಗುತ್ತದೆ. ಬಜೆಟ್, ಗ್ಯಾರಂಟಿಗಳ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ಈಗಾಗಲೇ ಹಣಕಾಸು ಇಲಾಖೆಯ ಉನ್ನತ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ. ಹಣವನ್ನು ಕ್ರೋಢೀಕರಿಸುವುದರ ಬಗ್ಗೆ ಇಲಾಖೆಯ ಅಧಿಕಾರಿಗಳಾದ ಎಲ್ ಕೆ ಅತೀಖ್ ಮತ್ತು ಏಕ್ರೂಪ್ ಕೌರ್ ಜೊತೆ ಚರ್ಚಿಸಿದ್ದಾರೆ.
ಮಾಜಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಹಣಕಾಸು) ಐಎಸ್‌ಎನ್ ಪ್ರಸಾದ್ ಮಾಧ್ಯಮಗಳಿಗೆ ಮಾಹಿತಿ ನೀಡಿ, ಹಣಕಾಸು ಇಲಾಖೆಯ ತಂಡವು ಇನ್ನೂ ಖಾತರಿಗಳನ್ನು ಕಾರ್ಯಗತಗೊಳಿಸಲು ಸಂಪನ್ಮೂಲಗಳನ್ನು ಕ್ರೋಢೀಕರಿಸುವ ಮಾರ್ಗಗಳನ್ನು ರೂಪಿಸುತ್ತಿದೆ ಎಂದು ಹೇಳಿದ್ದಾರೆ. ಸಿಎಂ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ.
ಗ್ಯಾರಂಟಿಗಳು ಮತ್ತು ಸರ್ಕಾರದ ಮೇಲಿನ ಹೊರೆಯ ಕುರಿತು ಮಾತನಾಡಿದ ಅರ್ಥಶಾಸ್ತ್ರಜ್ಞ ಮತ್ತು 14 ನೇ ಹಣಕಾಸು ಆಯೋಗದ ಮಾಜಿ ಸದಸ್ಯ ಪ್ರೊ.ಗೋವಿಂದ ರಾವ್, ಗ್ಯಾರಂಟಿ ಯೋಜನೆ ಸಮಸ್ಯೆ ಅಷ್ಟು ಗಂಭೀರವಾಗಿಯೇನೂ ಇಲ್ಲ. ಅದನ್ನು ಎದುರಿಸಲು ಎರಡು ಮಾರ್ಗಗಳಿವೆ. ಮೊದಲನೆಯದಾಗಿ, ಜಿಎಸ್‌ಟಿ ವ್ಯವಸ್ಥೆಯು ಹಗುರವಾಗಿದೆ. ಸರ್ಕಾರವು ಗಣನೀಯ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಇದಕ್ಕೆ ಹೆಚ್ಚುವರಿಯಾಗಿ ತೆರಿಗೆ ಹಂಚಿಕೆಯ ಮೂಲ ಕೂಡ ಹೆಚ್ಚಾಗಿದೆ. ಸಮಸ್ಯೆಯನ್ನು ನಿಭಾಯಿಸುವ ಇನ್ನೊಂದು ಮಾರ್ಗವೆಂದರೆ ಶೇಕಡಾ ಅರ್ಧದಷ್ಟು ಎರವಲು ಲಭ್ಯವಿದೆ. ವಿತ್ತೀಯ ಕೊರತೆಯು ಈಗ ಶೇಕಡಾ 2.5ರಷ್ಟಿದ್ದು, ಶೇಕಡಾ 3ರವರೆಗೆ ಸಾಲ ಪಡೆಯುವ ಅವಕಾಶವಿದೆ ಎಂದರು.
ಇದನ್ನೂ ಓದಿ: 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ಬಜೆಟ್ ಕೌಶಲ್ಯ ಒರೆಗೆ ಹಚ್ಚುವ ಸಮಯ; ಈ ಬಾರಿ ಕಠಿಣ ಪರೀಕ್ಷೆ!
ಆಸ್ತಿಗಳ ಮಾರಾಟ ಅಥವಾ ಗುತ್ತಿಗೆ: ಈ ಎರಡು ಆಯ್ಕೆಗಳು ಮಾತ್ರ ಇರುವುದೇ ಎಂದು ಕೇಳಿದಾಗ, ಆದಾಯದ ಬಿಕ್ಕಟ್ಟನ್ನು ಎದುರಿಸುವ ಇನ್ನೊಂದು ಮಾರ್ಗವೆಂದರೆ ರಾಜ್ಯದ ಆಸ್ತಿಗಳನ್ನು ಮಾರಾಟ ಮಾಡುವುದು ಅಥವಾ ಗುತ್ತಿಗೆ ನೀಡುವುದು. ಉದಾಹರಣೆಗೆ, ಕರ್ನಾಟಕವು ಮಯೂರ ಹೋಟೆಲ್‌ಗಳಂತಹ ಆಸ್ತಿಗಳನ್ನು ಹೊಂದಿದ್ದು ಅದನ್ನು ಗುತ್ತಿಗೆಗೆ ನೀಡಬಹುದು. ಆದಾಯ ಕೊರತೆಯನ್ನು ನೀಗಿಸಲು ಕೆಲವು ಪ್ರಧಾನ ಆಸ್ತಿಗಳನ್ನು ಸಹ ಮಾರಾಟ ಮಾಡಬಹುದು ಎಂದರು.
ಮೊದಲ ತ್ರೈಮಾಸಿಕದಲ್ಲಿ ಗುರಿ ಮುಟ್ಟಿದ್ದೇವೆ': ಅರ್ಥಶಾಸ್ತ್ರಜ್ಞ ಪ್ರೊ.ಆರ್.ಎಸ್.ದೇಶಪಾಂಡೆ, ಇದು ನಿರ್ಣಾಯಕ ಬಜೆಟ್ ಆಗಿರುತ್ತದೆ. ಆರ್ಥಿಕತೆ ಸರಿಯಾದ ಹಂತದಲ್ಲಿದ್ದು ಸರ್ಕಾರಕ್ಕೆ ಈಗ ತನ್ನ ಬದ್ಧತೆಯನ್ನು ಈಡೇರಿಸುವ ಜವಾಬ್ದಾರಿಯಿದೆ. ಹಣಕಾಸು ನಿರ್ವಹಣೆಯು ಅನಗತ್ಯ ಕೊರತೆಗಳು ಅಥವಾ ಸಾಲಗಳನ್ನು ಸೃಷ್ಟಿಸಬಾರದು. ಸ್ಟ್ಯಾಂಪ್‌ಗಳು ಮತ್ತು ನೋಂದಣಿ ಶುಲ್ಕಗಳು ಮತ್ತು ಮನರಂಜನಾ ತೆರಿಗೆಯನ್ನು ಹೆಚ್ಚಿಸುವ ಮೂಲಕ ಆದಾಯ ಕ್ರೋಢೀಕರಣವನ್ನು ಹೆಚ್ಚಿಸುವುದು ಒಂದು ಪರಿಹಾರವಾಗಿದೆ. ರಾಜ್ಯದಲ್ಲಿ ಮನರಂಜನಾ ತೆರಿಗೆ ಶೇ.30ರಷ್ಟಿದ್ದು, ಇತರೆ ರಾಜ್ಯಗಳಂತೆ ಇದನ್ನು ಶೇ.50 ಅಥವಾ ಶೇ.60ಕ್ಕೆ ಹೆಚ್ಚಿಸಬಹುದು.
ರಿಯಲ್ ಎಸ್ಟೇಟ್: ಆದಾಯ ಸಂಗ್ರಹದ ಇನ್ನೊಂದು ಮೂಲ ರಿಯಲ್ ಎಸ್ಟೇಟ್ ಕ್ಷೇತ್ರದಿಂದ ಬರಬಹುದು ಎಂದು ಅವರು ಹೇಳಿದರು. ಜಿಎಸ್‌ಟಿ ಸಂಗ್ರಹದ ಕುರಿತು ವಾಣಿಜ್ಯ ತೆರಿಗೆ ರಾಜ್ಯ ಆಯುಕ್ತೆ ಸಿ ಶಿಖಾ, ಮೊದಲ ತ್ರೈಮಾಸಿಕದಲ್ಲಿ ಜಿಎಸ್‌ಟಿ ಸಂಗ್ರಹಕ್ಕೆ ನೀಡಲಾದ ಗುರಿಯನ್ನು ನಾವು ತಲುಪಿದ್ದೇವೆ.
ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಸುಮಾರು ಶೇಕಡಾ 20ರಷ್ಟು ಈ ಬಾರಿ ಬೆಳವಣಿಗೆಯಾಗಿದೆ. ತೆರಿಗೆದಾರರ ಉತ್ತಮ ಅನುಸರಣೆ ಮತ್ತು ಸರ್ಕಾರ ಕೈಗೊಂಡ ಕ್ರಮಗಳು ಇದಕ್ಕೆ ಕಾರಣ. ವಾಣಿಜ್ಯ ತೆರಿಗೆ ಸಂಗ್ರಹಣೆ ಮತ್ತು ಹೆಚ್ಚುವರಿ ಆದಾಯ ಕ್ರೋಢೀಕರಣವನ್ನು ಹೆಚ್ಚಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.