ಬೆಂಗಳೂರು: ಅಂದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು ಕೇಳಿದ್ದರೆ 5 ವರ್ಷ ನಾನೇ ರಾಜ್ಯದ ಮುಖ್ಯಮಂತ್ರಿಯಾಗಿ ಇರುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಗುರುವಾರ ವಿಧಾನಸಭೆಯಲ್ಲಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯ ವೇಳೆ ಸಿದ್ದರಾಮಯ್ಯ ಉತ್ತರ ನೀಡುತ್ತಿದ್ದ ಸಂದರ್ಭದಲ್ಲಿ ಆಪರೇಷನ್ ಕಮಲದ ಪ್ರಸ್ತಾಪವಾಯಿತು. ಅಷ್ಟರಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಕುಮಾರಸ್ವಾಮಿ, ಆಪರೇಷನ್ ಕಮಲ ಎಂಬುದು ಇತ್ತು. ಆದರೆ ಮಾಧ್ಯಮಗಳಲ್ಲಿ ಕಳೆದ ಕೆಲವು ದಿನಗಳಿಂದ ಆಪರೇಷನ್ ಹಸ್ತ ಎಂಬ ಸುದ್ದಿ ಬರುತ್ತಿದೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಏಕೆ ಅವರ ಜೊತೆ ಸೇರಿಕೊಂಡಿದ್ದೀರಿ ಎಂದು ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದರು.
ಇದನ್ನು ಓದಿ: ಏ ರೇವಣ್ಣ... ನಿಂಬೆ ಹಣ್ಣು ಹಿಡಿದುಕೊಳ್ಳುವ ಕೈಯಲ್ಲಿ ಕೊಬ್ಬರಿ ಏಕೆ?: ಸಿಎಂ ಸಿದ್ದರಾಮಯ್ಯ ಪ್ರಶ್ನೆಗೆ ಸದನದಲ್ಲಿ ನಗು
ಸಿದ್ದರಾಮಯ್ಯ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು 2019ರಲ್ಲಿ ನನ್ನ ಜೊತೆ ಒಂದೂವರೆ ಗಂಟೆ ಚರ್ಚೆ ಮಾಡಿದ್ದರು. ಅವರ ಮಾತು ಕೇಳಿದ್ದರೆ ಐದು ವರ್ಷ ಸಿಎಂ ಆಗಿರುತ್ತಿದ್ದೆ ಎಂದು ಹೇಳಿದರು.
ಪದೇ ಪದೇ ಬಿಜೆಪಿಯ ಬಿ ಟೀಂ ಎಂದು ಜೆಡಿಎಸ್ ಅನ್ನು ಟೀಕಿಸುವ ಮುನ್ನ ಈ ವಿಚಾರ ತಿಳಿದುಕೊಳ್ಳಿ. ಕಾಂಗ್ರೆಸ್ ಜೊತೆಗೆ ಸಮ್ಮಿಶ್ರ ಸರ್ಕಾರ ನಡೆಸುತ್ತಿದ್ದ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಕರೆದು ಒಂದೂವರೆ ಗಂಟೆಗಳ ಕಾಲ ಚರ್ಚಿಸಿದ್ದರು. ಮುಂದಿನ ನಾಲ್ಕು ವರ್ಷ ಯಾವುದೇ ಸಮಸ್ಯೆ ಇರೊಲ್ಲ, ಸರ್ಕಾರಕ್ಕೆ ಬೆಂಬಲ ಕೊಡುತ್ತೇವೆ ಎಂದು ಆಹ್ವಾನ ನೀಡಿದ್ದರು. ಅವರ ಮಾತು ಕೇಳಿದ್ದರೆ ಕಳೆದ ಐದು ವರ್ಷಗಳ ಪೂರ್ಣ ಅವಧಿಗೆ ನಾನೇ ಸಿಎಂ ಆಗಿರುತ್ತಿದ್ದೆ. ಆದರೆ ನಾನು ಅದನ್ನು ತಿರಸ್ಕಾರ ಮಾಡಿದೆ. ಕಪ್ಪು ಚುಕ್ಕೆ ಬರಬಾರದು ಎಂಬ ಕಾರಣಕ್ಕಾಗಿ ಮುಂದುವರಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.