ರಾಜಕೀಯ

ಪ್ರತಿಪಕ್ಷಗಳ 2ನೇ ಸಭೆ: ಬೆಂಗಳೂರಿಗೆ ಸೋನಿಯಾ, ರಾಹುಲ್​, ಮಮತಾ, ಅಖಿಲೇಶ್ ಯಾದವ್ ಆಗಮನ

Lingaraj Badiger

ಬೆಂಗಳೂರು: ಬೆಂಗಳೂರಿನಲ್ಲಿ ಕಾಂಗ್ರೆಸ್ ಕರೆದಿರುವ ಎರಡನೇ ಏಕತಾ ಸಭೆಗೆ 24 ವಿರೋಧ ಪಕ್ಷಗಳ ನಾಯಕರಿಗೆ ಆಹ್ವಾನ ನೀಡಲಾಗಿದ್ದು, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಹಲವು ನಾಯಕರು ಸೋಮವಾರ ಬೆಂಗಳೂರಿಗೆ ಆಗಮಿಸಿದ್ದಾರೆ.

ಇಂದು ಎಚ್ ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ, ಗಾಂಧಿ, ರಾಹುಲ್ ಗಾಂಧಿ ಮತ್ತು ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸ್ವಾಗತಿಸಿದರು.

ಇನ್ನು ಸಮಾಜವಾದಿ ಪಕ್ಷದ ಅಧ್ಯಕ್ಷರೂ ಆದ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಷ್ ಯಾದವ್ ಅವರನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಚ್ ಎಎಲ್ ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡರು.

ಇಂದು ಮತ್ತು ನಾಳೆ ಬೆಂಗಳೂರಿನಲ್ಲಿ ಪ್ರತಿಪಕ್ಷಗಳ ಮಹಾ ಮೈತ್ರಿಕೂಟದ ಸಭೆ ನಡೆಯಲಿದ್ದು, 24 ವಿಪಕ್ಷಗಳ 49 ನಾಯಕರು ಭಾಗವಹಿಸುವ ಸಾಧ್ಯತೆ ಇದೆ. ಅಲ್ಲದೇ ವಿಶೇಷ ವಿಮಾನದ ಮೂಲಕ ಉದ್ಧವ್ ಠಾಕ್ರೆ, ಹೇಮಂತ್ ಸೊರೇನ್, ಲಾಲೂ ಪ್ರಸಾದ್ ಯಾದವ್, ನಿತೀಶ್, ಶರದ್ ಪವಾರ್ ಕೂಡ ಆಗಮಿಸಲಿದ್ದಾರೆ.

ಬರುವ ಲೋಕಸಭೆ ಚುನಾವಣೆಯಲ್ಲಿ ಶತಾಯಗತಾಯ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ವಿಪಕ್ಷಗಳು ಒಂದಾಗಿವೆ. ಈ ಸಂಬಂಧ ಈಗಾಗಲೆ ಜೂನ್ 23 ರಂದು ಬಿಹಾರದ ಪಾಟ್ನಾದಲ್ಲಿ ಮೊದಲ ವಿರೋಧ ಪಕ್ಷಗಳ ಸಭೆ ನಡೆಯಿತು. ಆದರೆ ಇಲ್ಲಿ ಒಮ್ಮತ ಮೂಡದ ಕಾರಣ ಇಂದು ಬೆಂಗಳೂರಲ್ಲಿ ಸಭೆ ನಡೆಸಲಿವೆ.

SCROLL FOR NEXT