ಬೆಂಗಳೂರು: 2023ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಸೋಲು ಕಂಡ ಬಿಜೆಪಿ ಹಾಗೂ ಜೆಡಿಎಸ್, 2024ರ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲಿವೆ, ಇದಕ್ಕೆ ವೇದಿಕೆ ಸಿದ್ಧವಾಗುತ್ತಿದ್ದು ದೇವೇಗೌಡರು ಮತ್ತು ಬಿಜೆಪಿ ವರಿಷ್ಠರು ಮಾತುಕತೆ ನಡೆಸಲಿದ್ದಾರೆ ಎಂಬ ಊಹಾಪೋಹ ಇಷ್ಟು ದಿನ ಕೇಳಿಬರುತ್ತಿತ್ತು.
ಇದಕ್ಕೆಲ್ಲ ಉತ್ತರವೆಂಬಂತೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್ ಡಿ ದೇವೇಗೌಡರು ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿಯವರೆಗೆ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ನಮ್ಮದು ಪ್ರಾದೇಶಿಕ ಪಕ್ಷ. ವಿಧಾನಸಭೆಯ ಸದಸ್ಯರು ಎಲ್ಲಾ ಸೇರಿ ಇಂದು ಸಭೆ ಮಾಡಿದ್ದಾರೆ. ಪ್ರಾದೇಶಿಕ ಪಕ್ಷ ಉಳಿಸುವ ನಿಟ್ಟಿನಲ್ಲಿ ಚರ್ಚೆ ಆಗಿದೆ.
ನಾನು ಎಲ್ಲರನ್ನು ಭೇಟಿ ಮಾಡಿ ಮುಂದೆ ಯಾವ ಮಾರ್ಗದಲ್ಲಿ ಹೋಗಬೇಕು ಅನ್ನುವ ಸಲಹೆ ನೀಡಿದ್ದೇನೆ. ಒಂದು ಕಡೆ ಎನ್ ಡಿಎ, ಮತ್ತೊಂದು ಕಡೆ ಇಂಡಿಯಾ, ಹೀಗಾಗಿ ನನಗಿರುವ ಅನುಭವವನ್ನು ಅವರ ಬಳಿ ಹಂಚಿಕೊಂಡಿದ್ದೇನೆ. ಕುಮಾರಸ್ವಾಮಿ ಪಕ್ಷದ ನಾಯಕರಾಗಿದ್ದಾರೆ, ಹೊಣೆ ಹೊತ್ತು ಕೆಲಸ ಮಾಡುತ್ತಿದ್ದಾರೆ. ನನ್ನ ಅನುಭವವನ್ನು ಅವರಿಗೂ ಹೇಳಿದ್ದೇನೆ, ಜೊತೆಗೆ ಈಗಲೂ ಸಲಹೆ ನೀಡಲು ಸಿದ್ದನಿದ್ದೇನೆ ಎಂದು ತಿಳಿಸಿರು.
ಇದನ್ನೂ ಓದಿ: ಬಿಜೆಪಿ ಸಖ್ಯಕ್ಕೆ'ಒಡೆದ ಮನೆ' ಯಾದ ಜೆಡಿಎಸ್: ಮೈತ್ರಿಗೆ ಎಚ್. ಡಿ ರೇವಣ್ಣ ವಿರೋಧ; ಎತ್ತು ಏರಿಗೆ, ಕೋಣ ನೀರಿಗೆ!
ಎನ್ ಡಿಎನೂ ಇಲ್ಲ, ಯುಪಿಎನೂ ಇಲ್ಲ: ಯಾವ ಮೈತ್ರಿಕೂಟದ ಜೊತೆ ಸೇರುವ ಪ್ರಶ್ನೆಯೇ ಇಲ್ಲ, ಕುಮಾರಸ್ವಾಮಿಯವರು ಮೊನ್ನೆ ವಿಪಕ್ಷಗಳ ಸಭೆಗೆ ಐಎಎಸ್ ಅಧಿಕಾರಿಗಳ ಬಳಕೆ ವಿರೋಧಿಸಿ ಟ್ವೀಟ್ ಮಾಡಿದ್ದರು. ಅದನ್ನು ಹಿಡಿದುಕೊಂಡು ಬಿಜೆಪಿ ನಾಯಕರು ಸದನದಲ್ಲಿ ಹೋರಾಟ ಮಾಡಿದರು. ಸದನದಲ್ಲಿ ಬಿಜೆಪಿಗೆ ಸಂಖ್ಯಾಬಲ ಹೆಚ್ಚಿದೆ, ಅದನ್ನು ಕಡೆಗಣಿಸಲು ಸಾಧ್ಯವಿಲ್ಲ, ಬಿಜೆಪಿಯವರು ಕಲಾಪ ಬಹಿಷ್ಕರಿಸಿ ವಾಕ್ ಔಟ್ ಮಾಡಿದರು. ಆಗ ಕುಮಾರಸ್ವಾಮಿಯವರೂ ಅವರನ್ನು ಅನುಸರಿಸಿದರು. ಅದಕ್ಕೆ ಜೆಡಿಎಸ್-ಬಿಜೆಪಿ ಒಟ್ಟಾಗಿದೆ ಎಂದು ಕಥೆ ಹೆಣೆಯುವುದು, ಸಂಬಂಧ ಕಲ್ಪಿಸುವುದು ಬೇಡ ಎಂದರು.
ಜೆಡಿಎಸ್ ಪ್ರಾದೇಶಿಕ ಪಕ್ಷ. ವಿಧಾನ ಮಂಡಲ ಕಲಾಪ ಮುಗಿಯುವ ಹಿನ್ನೆಲೆಯಲ್ಲಿ ನಮ್ಮ ಪಕ್ಷದ 19 ವಿಧಾನಸಭೆ ಸದಸ್ಯರು ಮತ್ತು 7 ಮಂದಿ ವಿಧಾನ ಪರಿಷತ್ ಸದಸ್ಯರು ಎಲ್ಲರೂ ಒಗ್ಗಟ್ಟಾಗಿ ತೀರ್ಮಾನ ತೆಗೆದುಕೊಂಡಿದ್ದಾರೆ.ಪ್ರಾದೇಶಿಕ ಪಕ್ಷವನ್ನು ಹೇಗೆ ಉಳಿಸಬೇಕೆಂದು ಸುದೀರ್ಘವಾಗಿ ಚರ್ಚೆ ಮಾಡಿ ತೀರ್ಮಾನ ಮಾಡಿದ್ದಾರೆ. ನಾನು ಇವತ್ತು ಅವರನ್ನು ಭೇಟಿಯಾಗಿ ಮುಂದೆ ಯಾವ ಮಾರ್ಗದಲ್ಲಿ ಮುಂದೆ ಹೋಗಬೇಕು ಎಂಬುದನ್ನು ಶಾಸಕರ ಜೊತೆ ಹಂಚಿಕೊಂಡಿದ್ದೇನೆ ಎಂದರು.
ನಾವು ಕುಡಿಯೋದೇ ಬೇಡ ಅಂತೀವಿ, ನೀವು ಸ್ಪಲ್ಪ ಕುಡೀರಿ ಅನ್ನುತ್ತಿದ್ದೀರಿ ಪರ್ವಾಗಿಲ್ಲ ರಾಷ್ಟ್ರದ ರಾಜಕಾರಣದ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ಈ ಪಕ್ಷ ಉಳಿಸುವುದು ರಾಜ್ಯದ ಜನರ ಹಿತದೃಷ್ಟಿಯಿಂದ ಅಗತ್ಯ, ನಮ್ಮ ಪಕ್ಷಕ್ಕಾಗಿರೋ ಅನ್ಯಾಯ ಅದೆಲ್ಲವನ್ನು ಜನರೆ ಮುಂದೆ ಇಟ್ಟು, ಕರ್ನಾಟಕದಲ್ಲಿ ಸಾಮರ್ಥ್ಯ ಇದೆ ಅನ್ನೋದನ್ನು ಸಾಬೀತು ಮಾಡುತ್ತೇವೆ, ರಾಜಕೀಯ ಲಾಭ ಮತ್ತು ತೋರಿಕೆಗಾಗಿ ಹೇಳುತ್ತಿಲ್ಲ. ಜೀವನದ್ದುಕ್ಕೂ ಹೋರಾಟ ಮಾಡುತ್ತೇವೆ ಎಂದರು.