ರಾಜಕೀಯ

ಶಾಸಕರು ದೂರು ನೀಡಿಲ್ಲ, ನಿಗದಿಯಂತೆ ಶಾಸಕಾಂಗ ಸಭೆ ಕರೆದಿದ್ದೇವೆ: ಸಿಎಂ, ಡಿಸಿಎಂ ಸ್ಪಷ್ಟನೆ

Sumana Upadhyaya

ಹುಬ್ಬಳ್ಳಿ/ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹೊಸದರಲ್ಲಿಯೇ ಕೈ ಶಾಸಕರು ಅಸಮಾಧಾನಗೊಂಡಿದ್ದು, ಸಚಿವರ ಕಾರ್ಯವೈಖರಿಗೆ ಅಸಮಾಧಾನಗೊಂಡು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ, ಹೀಗಾಗಿ ಮುಖ್ಯಮಂತ್ರಿಗಳು ಇದೇ 27ರಂದು ಶಾಸಕರ ಸಭೆ ಕರೆದಿದ್ದಾರೆ ಎಂದು ಸುದ್ದಿಯಾಗಿತ್ತು.

ಇದಕ್ಕೆ ಇಂದು ಸ್ಪಷ್ಟನೆ ನೀಡಿರುವ ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಶಾಸಕರು ದೂರು ಕೊಟ್ಟಿಲ್ಲ. ಶಾಸಕಾಂಗ ಸಭೆ ರೂಟಿನ್ ನಂತೆ ಕರೆದಿದ್ದೇವೆ, ಶಾಸಕರ ಸಭೆ ಕರೆಯಿರಿ ಎಂದಿದ್ದಾರೆ ಎಂದರು.

ಕಾಂಗ್ರೆಸ್ ಸರ್ಕಾರ ಬಂದು ಎರಡು ತಿಂಗಳಾಗಿದೆಯಷ್ಟೆ, ಎಲ್ಲಾ ಕ್ಷೇತ್ರಗಳಲ್ಲಿ ಏನೇನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ನಿಗದಿತ ವಾಡಿಕೆಯಂತೆ ಶಾಸಕಾಂಗ ಸಭೆಯನ್ನು ಇದೇ 27ರಂದು ಕರೆದಿದ್ದೇವೆ. ಕಳೆದ ವಾರ ಶಾಸಕಾಂಗ ಸಭೆ ಆಗಬೇಕಿತ್ತು. ರಾಹುಲ್ ಗಾಂಧಿ ಬರುತ್ತಿದ್ದ ಕಾರಣ ಶಾಸಕಾಂಗ ಸಭೆ ಕರೆದಿರಲಿಲ್ಲ ಎಂದರು.

ಡಿ ಕೆ ಶಿವಕುಮಾರ್ ಅವರನ್ನೇ ಕೇಳಿ: ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು ಸಿಂಗಾಪುರದಲ್ಲಿ ಪ್ಲಾನ್ ನಡೆಯುತ್ತಿದೆ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆ ಬಗ್ಗೆ ಕೇಳಿದಾಗ ಸಿಎಂ, ನನಗೇನು ಅದರ ಬಗ್ಗೆ ಗೊತ್ತಿಲ್ಲ, ನೀವು ಅವರನ್ನೇ ಕೇಳಿ ಎಂದರು. 

ಈ ತಿಂಗಳು ಎಲ್ಲಾ ಕಡೆ ಮಳೆಯಾಗುತ್ತಿದೆ. ಜೂನ್ ತಿಂಗಳಲ್ಲಿ ವಾಡಿಕೆ ಮಳೆಯಷ್ಟು ಮಳೆ ಸುರಿಯಲಿಲ್ಲ, ಸ್ವಲ್ಪ ಕೊರತೆಯಾಗಿ ರೈತರಿಗೆ ಸಮಸ್ಯೆಯಾಯಿತು. ಈ ತಿಂಗಳು ಉತ್ತಮ ಮಳೆಯಾಗುತ್ತಿದೆ ಎಂದರು. 

ಮಳೆ ಹೆಚ್ಚು ಬಿದ್ದು ಹಾನಿಗೀಡಾದ ಪ್ರದೇಶಗಳನ್ನು ವೀಕ್ಷಿಸಲು ತಂಡ ಮಾಡಿಕೊಂಡು ಇಂದು ಹಾವೇರಿ ಜಿಲ್ಲೆಯಿಂದ ಪ್ರವಾಸ ಆರಂಭಿಸುತ್ತಿದ್ದೇನೆ. ಹಾವೇರಿ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅದಕ್ಕಾಗಿ ಅಲ್ಲಿಂದ ಆರಂಭ ಮಾಡುತ್ತಿದ್ದೇನೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡುತ್ತೇನೆ ಎಂದರು.

ಗೃಹಲಕ್ಷ್ಮಿ ಯೋಜನೆ ದಾಖಲಾತಿಗೆ ಹಣ ತೆಗೆದುಕೊಂಡರೆ ಕ್ರಿಮಿನಲ್ ಕೇಸು: ಗೃಹಲಕ್ಷ್ಮಿ ಯೋಜನೆ ದಾಖಲಾತಿಗೆ ಹಣ ತೆಗೆದುಕೊಳ್ಳುವಂತಿಲ್ಲ, ಅದನ್ನು ಉಚಿತವಾಗಿ ಮಾಡಿಕೊಡಬೇಕು. ಯಾರಾದರೂ ಹಣ ತೆಗೆದುಕೊಂಡ ಸಾಕ್ಷಿಗಳಿದ್ದರೆ ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಸಿಎಂ ಎಚ್ಚರಿಕೆ ನೀಡಿದರು. 

ಕಾಂಗ್ರೆಸ್ ಸರ್ಕಾರ ಬಂದರೆ ಮಳೆಯಾಗಲ್ಲ ಎಂಬ ಬಿಜೆಪಿ ನಾಯಕರ ಟೀಕೆಗೆ ಪ್ರತಿಕ್ರಿಯಿಸಿದ ಸಿಎಂ, ಮೂಢನಂಬಿಕೆಗಳಲ್ಲಿ, ಮೌಢ್ಯದಲ್ಲಿ ನನಗೆ ನಂಬಿಕೆಯಿಲ್ಲ. ಬಿಜೆಪಿಯವರ ಅಧಿಕಾರವಧಿಯಲ್ಲಿ ಪ್ರವಾಹ ಬಂದು ಮನೆಗಳು ಕೊಚ್ಚಿ ಹೋಗಿದ್ದವು ಅದಕ್ಕೆ ಏನನ್ನಬೇಕು, ಮಳೆಗಾಲದಲ್ಲಿ ಪ್ರವಾಹ ಬರುವುದು, ಬರಗಾಲ ಬರುವುದು ಸ್ವಾಭಾವಿಕ. ಈಗ ಹವಾಮಾನ ವೈಪರೀತ್ಯವಿದೆ. ಇದು ಎಲ್ಲಾ ಕಡೆ ಆಗುತ್ತಿರುತ್ತದೆ ಎಂದರು. 

ಬಿಜೆಪಿ-ಜೆಡಿಎಸ್ ಒಂದಾದರೆ ನಮಗೆ ಭಯವಿಲ್ಲ: ಲೋಕಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್ ರಾಜ್ಯದಲ್ಲಿ ಮೈತ್ರಿಯಾದರೆ ನಮಗೆ ಭಯಪಡುವ ಅಗತ್ಯವಿಲ್ಲ. ನಾವು ಮುಂದಿನ ಬಾರಿ 15ರಿಂದ 20 ಸ್ಥಾನಗಳನ್ನು ಗೆದ್ದೇ ಗೆಲ್ಲುತ್ತೇವೆ ಎಂದರು. 

ಇಂದು ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಲ್ಲಿ ಸುದ್ದಿಗಾರರು ಕೇಳಿದಾಗ, ಶಾಸಕರು ಅಸಮಾಧಾನಗೊಂಡಿದ್ದಾರೆ ಎಂಬುದೆಲ್ಲ ಊಹಾಪೋಹ, ಯಾವುದೇ ಪತ್ರ ಬರೆದಿಲ್ಲ. ಶಾಸಕರು ಅವರ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಸುಮ್ಮನೆ ಊಹಾಪೋಹದ ಸುದ್ದಿ ಹಬ್ಬಿಸಲಾಗಿದೆ ಎಂದರು.

ನಮ್ಮ 5 ಕಾರ್ಯಕ್ರಮ ಇದಾವೆ ಜನರಿಗೆ ಯಾವ ರೀತಿ ತಲುಪುತ್ತಿದ್ದೇವೆ. ಭ್ರಷ್ಟಾಚಾರ ಏನಾದರೂ ನಡೆಯುತ್ತಿದೆಯಾ, ನಮ್ಮ ಶಾಸಕರಿಗೆ ಗೈಡ್ ಲೈನ್ಸ್ ಕೊಡಬೇಕು. ಮಾಹಿತಿ ಕೊಡಬೇಕು, ಪ್ರತಿ ಗ್ರಾಮ ಪಂಚಾಯತಿಯಲ್ಲಿ ನಮ್ಮ ಕಾರ್ಯಕ್ರಮ ಜನರಿಗೆ ತಲುಪಬೇಕು. ಎಲ್ಲ ಸಚಿವರೂ ಮಾತು ಕೇಳುತ್ತಿದ್ದಾರೆ, ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಸಮಾಧಾನ ಇಲ್ಲ, ವರ್ಗಾವಣೆ ಅವಧಿ ಮುಗಿದಿದೆ ಎಂದು ಹೇಳಿದರು.

SCROLL FOR NEXT