ರಾಜಕೀಯ

ಬಿಜೆಪಿ, ಜೆಡಿಎಸ್ ಕೈ ಜೋಡಿಸಿದರೆ ಆಗೋದು ಕೇವಲ 85 ಸ್ಥಾನ ಅಷ್ಟೇ; ಆಪರೇಷನ್ ಮಾತೆಲ್ಲಿ: ಡಿಕೆಶಿಗೆ ಸಿಎಂ ಇಬ್ರಾಹಿಂ

Nagaraja AB

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಬಿಜೆಪಿ, ಜೆಡಿಎಸ್ ಮೈತ್ರಿ ಕುರಿತ ಊಹಾಪೋಹಗಳು ಇತ್ತೀಚಿಗೆ ಹರಿದಾಡುತ್ತಿವೆ. ಅದಕ್ಕೆ ಪುಷ್ಟಿ ನೀಡುವಂತಹ ಕೆಲವೊಂದಿಷ್ಟು ವಿದ್ಯಮಾನಗಳು ಕೂಡಾ ಮೊದಲ ಅಧಿವೇಶನ ಸಂದರ್ಭದಲ್ಲಿ ನಡೆದಿದ್ದು, ರಾಜಕಾರಣದಲ್ಲಿ ಯಾರು ಶಾಶ್ವತ ಶತ್ರುಗಳು ಇಲ್ಲ. ಮಿತ್ರರೂ ಅಲ್ಲ ಎಂಬುದು ಸಾಬೀತಾಗಿದೆ. 

ಅದರಲ್ಲೂ ಬಿಜೆಪಿ ವಿಪಕ್ಷ ನಾಯಕನ ಅನುಪಸ್ಥಿತಿಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ  ವಿಪಕ್ಷ ನಾಯಕನ ರೀತಿಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಅನೇಕ ಆರೋಪ ಮಾಡಿದದ್ದು ಗೊತ್ತೇ ಇದೆ. ಅಲ್ಲದೇ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜೊತೆಗೆ ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಿಜೆಪಿ ಜೊತೆಗಿನ ಮೈತ್ರಿ ಮಾಡಿಕೊಳ್ಳಬಹುದು ಎಂಬಂತಹ ಅನುಮಾನ ಹುಟ್ಟುಹಾಕಿದ್ದಾರೆ.

ಇದರ ಬೆನ್ನಲ್ಲೇ, ಹೆಚ್. ಡಿ.ಕುಮಾರಸ್ವಾಮಿ ಅವರ ಸಿಂಗಾಪುರ ಪ್ರವಾಸ ಕುರಿತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಹೊಸದೊಂದು ಬಾಂಬ್ ಹಾಕಿದ್ದಾರೆ. ಸಿಂಗಾಪುರದಲ್ಲಿ ಕುಳಿತು ಕಾಂಗ್ರೆಸ್ ಸರ್ಕಾರ ಪತನಕ್ಕೆ ಸಂಚು ರೂಪಿಸಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈತ್ರಿಗೆ ಪ್ರಯತ್ನಿಸುತ್ತಿದ್ದು, ಬೆಂಗಳೂರು ಅಥವಾ ನವದೆಹಲಿಯಲ್ಲಿ ಸಭೆ ನಡೆಸಲು ಸಾಧ್ಯವಾಗದೆ ಈಗ ಸಿಂಗಾಪುರಕ್ಕೆ ತೆರಳಿದ್ದಾರೆ. ನಮ್ಮ ಶತ್ರುಗಳು ಅವರಿಗೆ ಮಿತ್ರರಾಗಿದ್ದಾರೆ. ಸರ್ಕಾರವನ್ನು ಅಸ್ಥಿರಗೊಳಿಸಲು ಯೋಜನೆ ರೂಪಿಸಲು ಸಿಂಗಾಪುರಕ್ಕೆ ತೆರಳಿರುವವರ ಬಗ್ಗೆ ನನ್ನ ಬಳಿ ಮಾಹಿತಿ ಇದೆ ಎಂದು ಹೇಳಿದ್ದಾರೆ.

ಡಿಕೆ ಶಿವಕುಮಾರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ,ಬಿಜೆಪಿ, ಜೆಡಿಎಸ್ ಕೈ ಜೋಡಿಸಿದರೆ ಆಗೋದು ಕೇವಲ 85 ಸ್ಥಾನಗಳಷ್ಟೇ, ಇನ್ನೂ 50ಕ್ಕೂ ಹೆಚ್ಚು ಸ್ಥಾನಗಳ ಅಗತ್ಯವಿದೆ. ಅದರ ಬಗ್ಗೆ ಏಕೆ ಕಾಳಜಿ ವಹಿಸುತ್ತೀರಿ? ಮೊದಲು, ನೀವು ನಿಮ್ಮ ಭರವಸೆಗಳನ್ನು ಈಡೇರಿಸಿ ಎಂದಿದ್ದಾರೆ. ಜೆಡಿಎಸ್ ಗೆ  ಆಪರೇಷನ್ ನಂತಹ ಯಾವುದೇ ಯೋಜನೆ ಇಲ್ಲ. ಶಿವಕುಮಾರ್ ಅವರಿಗೆ ಏನಾದರೂ ಸಂದೇಹಗಳಿದ್ದರೆ ನೇರವಾಗಿ ಬಂದು ನನ್ನ ಬಳಿ ಮಾತನಾಡಬಹುದು ಎಂದು ಹೇಳಿದ್ದಾರೆ. 

SCROLL FOR NEXT