ಬೆಂಗಳೂರು: ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಹೊಂದಾಣಿಕೆ ರಾಜಕಾರಣದಿಂದಾಗಿ ಕರ್ನಾಟಕದಲ್ಲಿ ಬಿಜೆಪಿಗೆ ಇಂದು ದುರ್ಗತಿ ಬಂದಿದೆ ಎಂದು ಬಿಜೆಪಿಯ ಇಬ್ಬರು ನಾಯಕರು ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತಲ್ಲಣ ಮೂಡಿಸಿದೆ.
ಈ ಮಧ್ಯೆ ನಿನ್ನೆ ಮಧ್ಯಾಹ್ನ ದಾವಣಗೆರೆಯಲ್ಲಿ ಬಿಜೆಪಿಯ ಕಾರ್ಯಕಾರಿಣಿ ಸಭೆ ನಡೆದಿತ್ತು. ಅದಾದ ಬಳಿಕ ಸಾಯಂಕಾಲ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಾಂಗ್ರೆಸ್ ನ ಹಿರಿಯ ನಾಯಕ ಶಾಮನೂರ್ ಶಿವಶಂಕರಪ್ಪ ಅವರನ್ನು ರೆಸಾರ್ಟ್ ವೊಂದರಲ್ಲಿ ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿತ್ತು ಭಾರೀ ಚರ್ಚೆ ಹುಟ್ಟುಹಾಕಿದೆ.
ಕಾಂಗ್ರೆಸ್ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಿಎಂ ಬೊಮ್ಮಾಯಿ ಅವರು ದಾವಣಗೆರೆ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಭೇಟಿ ಮಾಡಿದ್ದು, 25 ನಿಮಿಷಗಳ ಕಾಲ ಗುಪ್ತವಾಗಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಬೊಮ್ಮಾಯಿಯವರು ಮಾತು ಮುಗಿಸಿ ಹೊರಬರುತ್ತಿರುವ ದೃಶ್ಯ ಮಾಧ್ಯಮಗಳಿಗೆ ಲಭ್ಯವಾಗಿದೆ. ಉಭಯ ನಾಯಕರ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ನಿನ್ನೆ ಜಿಲ್ಲಾ ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿ ಪಕ್ಷ ಸೋಲಿಸಿದ್ದೀರಿ ಎಂದು ಹಲವರಿಂದ ಆಕ್ರೋಶ ವ್ಯಕ್ತವಾಗಿತ್ತು. ರಾಜ್ಯದ ಜಿಲ್ಲಾ ನಾಯಕರ ವಿರುದ್ಧ ಕಾರ್ಯಕರ್ತರು ಕಿರಿಕಾರಿದ್ದರು ಎಂದು ತಿಳಿದುಬಂದಿದೆ.
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಭರ್ಜರಿ ಗೆಲುವು, ಬಿಜೆಪಿಯ ಹೀನಾಯ ಸೋಲು ಕೇಸರಿ ಪಾಳಯದ ಅನೇಕ ನಾಯಕರಿಗೆ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಚುನಾವಣೆ ಮುಗಿದು ಫಲಿತಾಂಶ ಬಿದ್ದು ಒಂದು ತಿಂಗಳಾದ ಮೇಲೆ ಬಿಜೆಪಿ ಕೆಲ ನಾಯಕರು ಒಬ್ಬೊಬ್ಬರಾಗಿ ಧ್ವನಿ ಎತ್ತುತ್ತಿದ್ದಾರೆ. ಬಿಜೆಪಿ ಹಿರಿಯ ನಾಯಕರು ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂಬ ಅರ್ಥದಲ್ಲಿ ಪ್ರತಾಪ ಸಿಂಹ ಹಾಗೂ ಸಿಟಿ ರವಿ ಹೇಳಿಕೆ ನೀಡಿರುವುದು ಕಮಲ ಪಾಳಯದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿದೆ.
ಇದನ್ನೂ ಓದಿ: 'ಬಿಜೆಪಿಯ ಕೆಲ ಅತಿರಥ-ಮಹಾರಥ ನಾಯಕರ ಜೊತೆ ಸಿದ್ದರಾಮಯ್ಯ ಒಳ ಒಪ್ಪಂದ: ಕೆಲ ಮುಖಂಡರಿಂದ ಪಕ್ಷ ಮಣ್ಣು ತಿಂದಿದೆ'
ಸೌಹಾರ್ದ ಭೇಟಿಯಷ್ಟೆ: ಕಾಂಗ್ರೆಸ್ ಹಿರಿಯ ನಾಯಕನ ಜೊತೆ ಭೇಟಿ ಮಾತುಕತೆ ಇಂದು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಮಾಜಿ ಸಿಎಂ ಬೊಮ್ಮಾಯಿ ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಶಾಮನೂರು ಶಿವಶಂಕರಪ್ಪ ಅವರು ನಮ್ಮ ಹಿರಿಯರು ಮತ್ತು ದೂರದ ಸಂಬಂಧಿಯೂ ಹೌದು. ಹಲವಾರು ಬಾರಿ ನಾವು ಅವರು ನಮ್ಮ ಮನೆಯಲ್ಲಿ ಭೇಟಿ ಆಗಿದ್ದೇವೆ. ಇದರಲ್ಲಿ ರಾಜಕೀಯ ವಿಚಾರಗಳೇನು ಇಲ್ಲ, ಇದೊಂದು ಸೌಹಾರ್ದಯುತ ಭೇಟಿಯಷ್ಟೆ.
ನಾನು ಶಿಗ್ಗಾಂವಿಯಿಂದ ಬೆಂಗಳೂರಿಗೆ ಬರುವಾಗ ರಾತ್ರಿ ಊಟ ಮಾಡಲು ಹೊಟೆಲ್ ಗೆ ಹೋದಾಗ ಅವರು ತಮ್ಮ ಮೊಮ್ಮಕ್ಕಳ ಬಗ್ಗೆ ಹೊಸ ಸಂಬಂಧದ ಕುರಿತು ಚರ್ಚೆ ಮಾಡಲು ಸೇರಿದ್ದರು. ಆ ಸಂದರ್ಭದಲ್ಲಿ ಅವರ ಜೊತೆಗೆ ಹತ್ತು ನಿಮಿಷ ಉಭಯ ಕುಶಲೊಪರಿ ಮಾತನಾಡಿದ್ದು ಬಿಟ್ಟರೆ ಯಾವುದೇ ರಾಜಕೀಯ ವಿಷಯ ಪ್ರಸ್ತಾಪ ಆಗಿಲ್ಲ.
ಸ್ನೇಹ ಸಂಬಂಧಗಳೇ ಬೇರೆ ರಾಜಕೀಯ ಸಂಬಂಧವೇ ಬೇರೆ ನಾನು ನನ್ನ ರಾಜಕೀಯ ನಿಲುವಿನಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವ್ಯಂಗ್ಯ: ಬಿಜೆಪಿ ನಾಯಕರ ಮಾತಿಗೆ ಎಂದಿನಂತೆ ಕಾಂಗ್ರೆಸ್ ವ್ಯಂಗ್ಯ ಮಾಡಿದ್ದು, ಬಿಜೆಪಿಯಲ್ಲಿ ಸೋಲಿನ ಅವಲೋಕನ ಚೆನ್ನಾಗಿಯೇ ನಡೆಯುತ್ತಿದೆ!, ತೆರೆಯ ಹಿಂದೆ ಪ್ರಹ್ಲಾದ್ ಜೋಶಿ ಮತ್ತು ಬಿ ಎಲ್ ಸಂತೋಷ್ ಆಟವಾಡುತ್ತಿದ್ದಾರೆ. ಸಿ ಟಿ ರವಿ ಮತ್ತು ಪ್ರತಾಪ್ ಸಿಂಹ ಅವರಿಗೆ ಧೈರ್ಯವಿದ್ದರೆ ಡ್ಜಸ್ಟಮೆಂಟ್ ಮಾಡಿಕೊಂಡ ತಮ್ಮ ಪಕ್ಷದ ನಾಯಕರ ಹೆಸರು ಹೇಳಿ ಆರೋಪಿಸಲಿ ಎಂದಿದ್ದಾರೆ.