ಬೆಂಗಳೂರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಕಾಂಗ್ರೆಸ್ ನ ಅತ್ಯಂತ ಹಿರಿಯ ಶಾಸಕರೆನಿಸಿರುವ ಶಾಮನೂರು ಶಿವಶಂಕರಪ್ಪ ದಾವಣಗೆರೆಯ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್ ಒಂದರಲ್ಲಿ ರಹಸ್ಯ ಸಭೆ ನಡೆಸಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಆದರೆ ಇದೊಂದು ಸೌಹಾರ್ದಯುತ ಭೇಟಿ, ಜೊತೆಗೆ ಬೊಮ್ಮಾಯಿ ಅವರಿಗೆ ಶಾಮನೂರು ಶಿವಶಂಕರಪ್ಪ ದೂರದ ಸಂಬಂಧಿ, ಹೀಗಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ, ಇದರಲ್ಲಿ ಅಚ್ಚರಿ ಏನಿಲ್ಲ ಎಂದು ಯಡಿಯೂರಪ್ಪ ಆಪ್ತರೊಬ್ಬರು ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರೊಂದಿಗೆ ರಹಸ್ಯ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಹೇಳಿರುವ ಸಿ.ಟಿ.ರವಿ, ಸುನೀಲ್ ಕುಮಾರ್ ಮತ್ತು ಪ್ರತಾಪ್ ಸಿಂಹ ಅವರ ಆರೋಪಗಳಿಂದ ರಕ್ಷಿಸಿಕೊಳ್ಳಲು ಈ ರೀತಿ ಹೇಳಲಾಗಿದೆ ಎಂದು ಅವರು ತಿಳಿಸಿದ್ದಾರೆ. ಬಿಜೆಪಿ ಸೋಲಿಗೆ ಕಾರಣಗಳ ಬಗ್ಗೆ ಪಕ್ಷದೊಳಗೆ ಬಹಿರಂಗವಾಗಿ ಚರ್ಚೆಯಾಗುತ್ತಿದೆ. ಚುನಾವಣೆ ಮುಗಿದ ನಾಲ್ಕು ವಾರಗಳ ನಂತರ ಇದನ್ನು ಏಕೆ ಎತ್ತಲಾಗುತ್ತಿದೆ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಸಂಸದ ಪ್ರತಾಪ್ ಸಿಂಹ ಎಳಸು, ರಾಜಕೀಯ ಪ್ರಬುದ್ಧತೆ ಇಲ್ಲ; ಹೊಂದಾಣಿಕೆ ಮಾಡಿಕೊಂಡವರ ಹೆಸರು ಬಹಿರಂಗಪಡಿಸಲಿ: ಸಿದ್ದರಾಮಯ್ಯ
ಸ್ನೇಹವೇ ಬೇರೆ, ರಾಜಕೀಯ ಸಂಬಂಧಗಳೇ ಬೇರೆ, ನನ್ನ ರಾಜಕೀಯ ನಿಲುವಿನಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಶಾಮನೂರು ಭೇಟಿ ನಂತರ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ಬೊಮ್ಮಾಯಿ ಉತ್ತಮ ನಾಯಕ, ಆದರೆ ಚುನಾವಣೆ ಮುಗಿದು ಒಂದು ತಿಂಗಳಾದರೂ ಇದುವರೆಗೆ ಯಾವುದೇ ನಿರ್ಧಾರವಾಗಿಲ್ಲ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಸೋಲಿನ ಅವಮಾನವನ್ನು ಯಾರ ತಲೆ ಮೇಲೆ ಗೂಬೆ ಕೂರಿಸುವುದು, ಯಾರನ್ನು ಹರಕೆಯ ಕುರಿ ಮಾಡುವುದು ಎಂದು ಯೋಚಿಸುತ್ತಿರುವಂತೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ; 'ಬಿಜೆಪಿಯ ಕೆಲ ಅತಿರಥ-ಮಹಾರಥ ನಾಯಕರ ಜೊತೆ ಸಿದ್ದರಾಮಯ್ಯ ಒಳ ಒಪ್ಪಂದ: ಕೆಲ ಮುಖಂಡರಿಂದ ಪಕ್ಷ ಮಣ್ಣು ತಿಂದಿದೆ'
ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಯುವಕರೊಬ್ಬರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಬೇಕು ಎಂಬ ಹೇಳಿಕೆ ಮತ್ತು ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ಮಾತುಗಳು ಸಂತೋಷ್ ಅವರಿಂದ ಬಂದ ಮಾತುಗಳಾಗಿವೆ ಎಂದು ಬಿಜೆಪಿ ಮುಖಂಡ ಹಾಗೂ ಯಡಿಯೂರಪ್ಪ ಆಪ್ತರೊಬ್ಬರು ತಿಳಿಸಿದ್ದಾರೆ.