ಕಲಬುರಗಿ: ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪದ ವಿರುದ್ಧ ರಾಜ್ಯ ಬಿಜೆಪಿ ತೀವ್ರವಾಗಿ ಖಂಡನೆ ವ್ಯಕ್ತಪಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ರಾಜ್ಯದಲ್ಲಿ ದ್ವೆಷದ ರಾಜಕಾರಣ ಪ್ರಾರಂಭ ಮಾಡಿದ್ದೆ ಮುಖ್ಯಮಂತ್ರಿ ಸಿದ್ದರಾಮಯ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದ ಪಠ್ಯಪುಸ್ತಕಗಳಲ್ಲಿನ ಕೆಲವು ಭಾಗಗಳನ್ನು ಬದಲಾಯಿಸಿತು. ‘ಗೋಹತ್ಯೆ ತಡೆ ಕಾಯ್ದೆ ಮತ್ತು ಮತಾಂತರ ತಡೆ ಕಾಯ್ದೆಯನ್ನು ಹಿಂಪಡೆಯುವುದಾಗಿ ಘೋಷಿಸಿತು. ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿ ಬಂಧಿಸಲು ಆರಂಭಿಸಿತು. ದ್ವೇಷದ ರಾಜಕಾರಣ ಆರಂಭಿಸಿದ್ದು ಸಿದ್ದರಾಮಯ್ಯ ಅವರೇ ಹೊರತು ಹೊರತು ಕೇಂದ್ರ ಸರ್ಕಾರವಲ್ಲ ಎಂದು ಕಿಡಿಕಾರಿದರು.
ಚುನಾವಣೆ ವೇಳೆ ಭರವಸೆ ನೀಡಿದಂತೆ ಕಾಂಗ್ರೆಸ್ ಸರ್ಕಾರ ಬಡವರಿಗೆ ಪ್ರತೀ ತಿಂಗಳು 10 ಕೆಜಿ ಅಕ್ಕಿಯನ್ನು ಮೊದಲು ನೀಡಲಿ. ನಂತರ ಕೇಂದ್ರ ಸರ್ಕಾರ ತನ್ನ ಪಾಲಿನ 5 ಕೆಜಿ ಅಕ್ಕಿಯನ್ನು ನೀಡಲಿದೆ ಎಂದು ಸವಾಲು ಹಾಕಿದರು.
ಬಳಿಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆ ವಿಚಾರ ಕುರಿತು ಮಾತನಾಡಿದ ಕಟೀಲ್, ವಿಧಾನಸಭೆ ಅಧಿವೇಶನ ಆರಂಭವಾಗುವಷ್ಟರಲ್ಲಿ ಪ್ರತಿಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ. ಅಧಿವೇಶನ ಆರಂಭವಾಗಲಿ, ಸೂಕ್ತ ಸಮಯದಲ್ಲಿ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡುತ್ತೇವೆ ಎಂದರು.