ಹುಬ್ಬಳ್ಳಿ: ಈಗಾಗಲೇ ರಾಜ್ಯದ ಜನರಿಗೆ ಕೇಂದ್ರ ಸರ್ಕಾರ ತಲಾ 5 ಕೆಜಿ ಅಕ್ಕಿ ಕೊಡುತ್ತಿದ್ದು, ಕೇಂದ್ರದ ಅಕ್ಕಿ ಬಿಟ್ಟು 10 ಕೆಜಿ ಅಕ್ಕಿ ಕೊಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಆಗ್ರಹಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪದೇ ಪದೇ 10 ಕೆಜಿ ಅಕ್ಕಿಗೆ ಅಡ್ಡಗಾಲು ಹಾಕುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಕೇಂದ್ರ 5 ಕೆಜಿ ಅಕ್ಕಿ ಕೊಡುತ್ತಿದೆ, ನಮ್ಮದು ಬಿಟ್ಟು ಸಿಎಂ 10 ಕೆ.ಜಿ ಅಕ್ಕಿ ಕೊಡುತ್ತಾರಾ ಎಂಬುದನ್ನು ಮೊದಲು ಸ್ಪಷ್ಟಪಡಿಸಲಿ ಎಂದು ಹೇಳಿದರು.
ರಾಜ್ಯ ಸರ್ಕಾರಕ್ಕೆ ಅಕ್ಕಿ ಬೇಕಾದರೇ ಕೇಂದ್ರವನ್ನು ಬಳಿ ಕೇಳಬೇಕು. ನೈಸರ್ಗಿಕ ವಿಕೋಪ ಬಂದಾಗ ನಮಗೆ ಅಕ್ಕಿ ಸ್ಟಾಕ್ ಅವಶ್ಯಕವಿದೆ. ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ಸೇರಿಸಿ ಎಲ್ಲರಿಗೂ ಒಂದೇ ಕಾನೂನು ಇದೆ. ಹೀಗಾಗಿ ಕಾಂಗ್ರೆಸ್ ಮೊದಲು ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಕಿಡಿಕಾರಿದರು.
ಈಗಾಗಲೇ ಮಳೆ ಕೊರತೆಯಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕುಸಿತಗಳು ಕಂಡುಬರುತ್ತಿದೆ. ಇಂತಹ ಸಂದರ್ಭದಲ್ಲಿ ಹಣದುಬ್ಬರವನ್ನು ನಿಯಂತ್ರಣದಲ್ಲಿಡಲು ಕೇಂದ್ರ ಸರ್ಕಾರವು ಹೆಚ್ಚುವರಿ ಸ್ಟಾಕ್ ಅನ್ನು ನಿರ್ವಹಿಸಬೇಕುಯ ಕೇಂದ್ರವು ಅಕ್ಕಿ ಸೇರಿದಂತೆ ಆಹಾರ ಧಾನ್ಯಗಳನ್ನು ಮುಕ್ತ ಮಾರುಕಟ್ಟೆಯಿಂದ ನ್ಯಾಯಯುತ ಬೆಲೆಯನ್ನು ನಿಗದಿಪಡಿಸುವ ಮೂಲಕ ಖರೀದಿಸುತ್ತದೆ, ಕರ್ನಾಟಕದಲ್ಲಿಯೂ ಸರ್ಕಾರ ಅದೇ ರೀತಿ ಮಾಡಬೇಕು ಎಂದು ಹೇಳಿದರು.
ಇಡೀ ದೇಶಕ್ಕೆ ಅಚ್ಛೇ ದಿನ್ ಬರುತ್ತೆ ಎಂದು ಹೇಳಿದ್ದೆವು. ದೇಶದಲ್ಲಿ ಆಹಾರ ಭದ್ರತೆ ಇದೆ, ಹಣದುಬ್ಬರ ಕಡಿಮೆಯಾಗಿದೆ. ಕೋವಿಡ್, ರಷ್ಯಾ- ಉಕ್ರೇನ್ ಯುದ್ಧದ ನಡುವೆಯೂ ದೇಶ ಆರ್ಥಿಕವಾಗಿ ಸುಸ್ಥಿರವಾಗಿದೆ. ಇಡೀ ದೇಶದಲ್ಲಿ ಮೋದಿಯವರ ಬಗ್ಗೆ ಗೌರವವಿದೆ. ಸಿದ್ದರಾಮಯ್ಯ ಸುಳ್ಳು ಭಾಷಣ ಮಾಡುವುದರಿಂದ ಏನೂ ಆಗಲ್ಲ ಎಂದು ತಿಳಿಸಿದರು.
ರಾಜ್ಯ ಸರ್ಕಾರ ವಿದ್ಯುತ್ ದರ ಏರಿಸಿ ಜನರಿಗೆ ತೊಂದರೆ ಕೊಡುತ್ತಿದೆ. ಇಂಡಸ್ಟ್ರಿಗಳನ್ನು ಓಡಿಸುತ್ತಿದ್ದೀರಿ, ವ್ಯವಹಾರ ಮಾಡಲು ಬಿಡುತ್ತಿಲ್ಲ. ಕೈಗಾರಿಕೆಗಳ ಮೇಲೆ ಯಾಕೆ ಭಾರ ಹಾಕಿದ್ದೀರಿ?. ಜನರಿಗೆ ಭಾಗ್ಯಗಳ ಹೆಸರಲ್ಲಿ ಮೋಸ ಮಾಡಿ ಕಂಡೀಷನ್ ಹಾಕುತ್ತಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರದ ಸ್ಥಿರ ನೀತಿಯಿಂದಾಗಿ ರಾಜ್ಯವು ಸಾಕಷ್ಟು ವಿದೇಶಿ ನೇರ ಹೂಡಿಕೆಯನ್ನು (ಎಫ್‌ಡಿಐ) ಆಕರ್ಷಿಸಿತ್ತು. ಕೈಗಾರಿಕೆಗಳ ಬೇಡಿಕೆ ಈಡೇರಿಸಲು ಸರಕಾರ ವಿಫಲವಾದಲ್ಲಿ ರಾಜ್ಯಕ್ಕೆ ನಷ್ಟ ಉಂಟಾಗಲಿದ್ದು, ಸಾವಿರಾರು ಜನರ ಉದ್ಯೋಗ ಅಪಾಯಕ್ಕೆ ಸಿಲುಕಲಿದೆ ಎಂದು ಎಚ್ಚರಿಸಿದರು.