ರಾಜಕೀಯ

ಬಿಜೆಪಿ ರಾಜ್ಯ ಶಿಸ್ತು ಸಮಿತಿಯಿಂದ ಬಸನಗೌಡ ಪಾಟೀಲ್​ ಯತ್ನಾಳ್​​, ರೇಣುಕಾಚಾರ್ಯಗೆ ನೋಟಿಸ್​​!

Srinivas Rao BV

ಬೆಂಗಳೂರು: ಬಿಜೆಪಿ ನಾಯಕರು ಬಹಿರಂಗವಾಗಿ ಪಕ್ಷಕ್ಕೆ ಧಕ್ಕೆ ತರುವಂತಹ ಹೇಳಿಕೆ ಹಿನ್ನೆಲೆ ಪಕ್ಷದ ರಾಜ್ಯ ಶಿಸ್ತು ಸಮಿತಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಶಾಸಕ ರೇಣುಕಾಚಾರ್ಯ ಸೇರಿ ಕೆಲವರಿಗೆ ಬಹಿರಂಗ ಹೇಳಿಕೆ ನೀಡದಂತೆ ನೋಟಿಸ್‌ ಜಾರಿ ಮಾಡಿದೆ.

ಪಕ್ಷದ ನಾಯಕರ ಹೆಸರು ಉಲ್ಲೇಖಿಸದೇ ಮಾಜಿ ಶಾಸಕ, ಸಚಿವ ಎಂಪಿ ರೇಣುಕಾಚಾರ್ಯ ತೀವ್ರ ವಾಗ್ದಾಳಿ ನಡೆಸಿ ಪಕ್ಷದ ಕಚೇರಿ ಕಾರ್ಪೊರೇಟ್ ಕಚೇರಿಯಂತಾಗಿದೆ. ಲೋಕಸಭಾ ಚುನಾವಣೆ, ಜಿಲ್ಲಾ ಪಂಚಾಯತ್ ಚುನಾವಣೆ, ತಾಲೂಕು ಪಂಚಾಯತ್ ಚುನಾವಣೆಯನ್ನು ಎದುರಿಸಲು ಸಹಕಾರಿಯಾಗುವ ನಿಟ್ಟಿನಲ್ಲಿ ಪಕ್ಷವನ್ನು ಸದೃಢಗೊಳಿಸುವತ್ತ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.

ರಾಜ್ಯ ವಿಧಾನಸಭಾ ಚುನಾವಣೆ ಮುಕ್ತಾಯಗೊಂಡ ನಂತರ ಬಿಜೆಪಿ ರಾಜ್ಯಾಧ್ಯಕ್ಷರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು ಎಂದೂ ರೇಣುಕಾಚಾರ್ಯ ಅಭಿಪ್ರಾಯಪಟ್ಟಿದ್ದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಗೆ ಪಕ್ಷದ ಬಗ್ಗೆ ಗೌರವವಿದ್ದು, ಆದರೆ ಪಕ್ಷದ ನಾಯಕರು ಆಂತರಿಕವಾಗಿ ಎಲ್ಲವನ್ನೂ ಸರಿಪಡಿಸಬೇಕು ಎಂದು ಹೇಳಿದ್ದಾರೆ.

ರಾಜ್ಯ, ಕೇಂದ್ರಗಳಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಹೇಳಿದ್ದರು.

ಪಕ್ಷದ ಕಾರ್ಯಕರ್ತರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಹೆಸರನ್ನು ಉಲ್ಲೇಖಿಸದೇ ಕೆಲವು ನಾಯಕರಿಗೆ ಸರ್ವಾಧಿಕಾರಿ ಧೋರಣೆಯನ್ನು ಬಿಡುವಂತೆ ರೇಣುಕಾಚಾರ್ಯ ಮನವಿ ಮಾಡಿದ್ದಾರೆ.

ಚುನಾವಣೆಗೆ 4 ದಿನಗಳ ಮುನ್ನ ನಾಯಕರು ಆನ್ ಲೈನ್ ಸಭೆಗಳು, ವರ್ಚ್ಯುಯಲ್ ರ್ಯಾಲಿಗಳನ್ನು ನಡೆಸಿದ್ದರು. ನಾಯಕರ ಮುಖ ನೋಡಿಯೇ ಕಾರ್ಯಕರ್ತರು ಸುಸ್ತಾಗಿದ್ದರು ಎಂದು ಹೇಳಿದ ರೇಣುಕಾಚಾರ್ಯಗೆ ನಾಯಕರ ಹೆಸರು ಉಲ್ಲೇಖಿಸುವಂತೆ ಒತ್ತಾಯಿಸಿದಾಗ, ಸಂದರ್ಭ ಬಂದಾಗ ಹೆಸರು ಹೇಳುವುದಾಗಿ ತಿಳಿಸಿದ್ದಾರೆ. 

ನಾನು ಅಮಿತ್ ಶಾ, ಮೋದಿ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಇಲ್ಲಿನ ಕೆಲವು ನಾಯಕರಿಗೆ ಕಠಿಣ ಸ್ವಾಭಿಮಾನ ಇದೆ ಅವರ ನಡುವೆಯೇ ಸ್ಪರ್ಧೆ ಇದೆ. ಗ್ರಾಮಪಂಚಾಯಿತಿ ಚುನಾವಣೆ ಗೆಲ್ಲದವರೂ ಸಹ ನಮಗೆ ಮಾರ್ಗದರ್ಶನ ನೀಡುತ್ತಿದ್ದರು. ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ರಾಜ್ಯದ ಸಹ ಉಸ್ತುವಾರಿಯಾಗಿದ್ದರು ಅವರು ನಮಗೆ ಮಾರ್ಗದರ್ಶನ ನೀಡಿದ್ದರು, ಅಣ್ಣಾಮಲೈ ಏನು ದೊಡ್ಡ ಹೀರೋನಾ? ಇಲ್ಲಿ ಬಂದು ಪೋಸ್ ಕೊಡುತ್ತಿದ್ದರು ಎಂದು ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಸಿಎಂ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರು ತಮಗೆ ಸೆಲ್ಯೂಟ್ ಹೊಡೆಯುತ್ತಿದ್ದವರ (ಅಣ್ಣಾಮಲೈ) ಅವರ ಮಾತುಗಳನ್ನು ಕೇಳಬೇಕಾಯಿತು ಎಂದು ರೇಣುಕಾಚಾರ್ಯ ಆರೋಪಿಸಿದ್ದಾರೆ.

SCROLL FOR NEXT