ಶಿವಮೊಗ್ಗ: ಕಾಂಗ್ರೆಸ್‌ನಿಂದ ವಲಸೆ ಬಂದವರಿಂದ ಬಿಜೆಪಿಯಲ್ಲಿ ಶಿಸ್ತು ಹಾಳಾಯಿತು ಎಂದು ನಾನು ಎಲ್ಲಿಯೂ ಹೇಳಿಲ್ಲ. ಆದರೆ ವಾಹಿನಿಯೊಂದು ಹಾಗೆ ಸುಳ್ಳು ಸುದ್ದಿ ಬಿತ್ತರಿಸಿದ್ದರಿಂದ ಗೊಂದಲ ಸೃಷ್ಟಿಯಾಗಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಬೇಸರ ವ್ಯಕ್ತಪಡಿಸಿದರು.
‘ಹುಬ್ಬಳ್ಳಿಯಲ್ಲಿ ನಾನು ಆ ರೀತಿ ಹೇಳಿಕೆ ನೀಡಿದ್ದೇನೆ ಎಂದು ಸುದ್ದಿ ವಾಹಿನಿಯೊಂದು ಮೊದಲು ಪ್ರಸಾರ ಮಾಡಿತು. ಸಂಬಂಧಿಸಿದ ಮಾಧ್ಯಮದ ಪ್ರತಿನಿಧಿಗೆ ಆ ಬಗ್ಗೆ ನಾನು ಪ್ರಶ್ನಿಸಿದ್ದೆ. ನಾನು ಆ ಸುದ್ದಿ ಕಳಿಸಿಯೇ ಇರಲಿಲ್ಲ. ಆದರೂ ಬೆಂಗಳೂರಿನಿಂದ ಹಾಗೆ ಸುದ್ದಿ ಬಿತ್ತರಿಸುತ್ತಿದ್ದಾರೆ ಎಂದು ಆ ಪತ್ರಕರ್ತ ಅಳಲು ತೋಡಿಕೊಂಡರು. ಆ ಬಗ್ಗೆ ಸ್ಪಷ್ಟನೆ ಕೊಟ್ಟರೂ ಆ ಸುದ್ದಿ ವಾಹಿನಿ ಅದನ್ನು ಪ್ರಕಟಿಸಲಿಲ್ಲ’ ಅಷ್ಟರಲ್ಲಿ ಹಾನಿಯಾಗಿತ್ತು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿಗೆ ಆಪರೇಷನ್ ಕಮಲ ಮುಳುವು, ವಲಸಿಗರು ಪಕ್ಷಕ್ಕೆ ಬಂದ್ಮೇಲೆ ಅಶಿಸ್ತು: ಬಾಂಬೆ ಬಾಯ್ಸ್ ವಿರುದ್ಧ ಈಶ್ವರಪ್ಪ ಕಿಡಿ
ಇತ್ತೀಚಿನ ಬೆಳವಣಿಗೆಗಳಿಂದ ನನಗೆ ನೋವಾಗಿದೆ ಎಂದು ಈಶ್ವರಪ್ಪ ಹೇಳಿದರು. ಅವರಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದ್ದನ್ನು ಹೇಗೆ ಮರೆಯಲಿ. ನಾನು ಕೂಡ ಆಗ ಕ್ಯಾಬಿನೆಟ್ ಸಚಿವನಾಗಿದ್ದೆ, ಈ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರೊಂದಿಗೆ ಮಾತನಾಡಿದ್ದೇನೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.
ಆದರೆ, ಕಾಂಗ್ರೆಸ್ ನ ಅಶಿಸ್ತು ಸಂಸ್ಕೃತಿ ಬಿಜೆಪಿಗೂ ವ್ಯಾಪಿಸಿದೆ ಎಂದು ಪುನರುಚ್ಚರಿಸಿದರು. ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನವಿದೆ ಎಂದ ಈಶ್ವರಪ್ಪ, ಸಮಸ್ಯೆಗಳಿದ್ದು ಪಕ್ಷದಲ್ಲೇ ಬಗೆಹರಿಸಿಕೊಳ್ಳುವುದಾಗಿ ತಿಳಿಸಿದರು.
ಚುನಾವಣಾ ಭರವಸೆಗಳನ್ನು ಜಾರಿಗೊಳಿಸಲು ವಿಳಂಬ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಮುಂಬರುವ ಬಜೆಟ್ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಈ ವಿಷಯಗಳನ್ನು ಪ್ರಸ್ತಾಪಿಸಲಿದ್ದಾರೆ ಎಂದು ಅವರು ಹೇಳಿದರು. 2024ರ ಲೋಕಸಭೆ ಚುನಾವಣೆಗೆ ಹಾವೇರಿಯಿಂದ ಸ್ಪರ್ಧಿಸಲು ತಮ್ಮ ಪುತ್ರ ಕಾಂತೇಶ್ ಬಯಸಿದ್ದು, ವರಿಷ್ಠರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದರು.