ರಾಜಕೀಯ

ಅನಾರೋಗ್ಯ ಕಾರಣದಿಂದ ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು: ರಾಜನಾಥ್ ಸಿಂಗ್

Sumana Upadhyaya

ಬೆಳಗಾವಿ: 2021ರಲ್ಲಿ ಬಿ ಎಸ್ ಯಡಿಯೂರಪ್ಪನವರು ಅನಾರೋಗ್ಯ ಕಾರಣದಿಂದ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಬಳಿಕ ಸಿಎಂ ಹುದ್ದೆಗೇರಿದ ಬಸವರಾಜ ಬೊಮ್ಮಾಯಿಯವರು ಕಳೆದ ಒಂದೂವರೆ ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಾ ಬಂದಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಬೆಳಗಾವಿಯಲ್ಲಿಂದು ಬಿಜೆಪಿ ವಿಜಯ ಸಂಕಲ್ಪ ರಥ ಯಾತ್ರೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರು ಇಷ್ಟು ಹಲವು ದಶಕಗಳಿಂದ ಈ ಮಣ್ಣಿನ ಮಗನಾಗಿ ಬಿಜೆಪಿ ಪಕ್ಷಕ್ಕಾಗಿ ಮತ್ತು ರಾಜ್ಯಕ್ಕಾಗಿ ದುಡಿಯುತ್ತಾ ಬಂದಿದ್ದಾರೆ. ಅವರ ಸೇವೆಗೆ ಪಕ್ಷ ಯಾವತ್ತೂ ಗೌರವ ನೀಡುತ್ತದೆ. ಪ್ರಧಾನಿ ಮೋದಿಯಂತೆ ಯಡಿಯೂರಪ್ಪನವರು ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ. ಈ ಮೂಲಕ ಮುಂದಿನ 5 ವರ್ಷಗಳ ಕಾಲ ದಕ್ಷಿಣ ಭಾರತದಲ್ಲಿ ನಂಬರ್ 1 ರಾಜ್ಯ ಮಾಡಬೇಕೆಂಬ ಮಹದಾಸೆ ಅವರದ್ದು ಎಂದು ಹೇಳಿದರು.

ಪ್ರತಿದಿನ ಹುಟ್ಟಿಕೊಳ್ಳುವ ಕಾಂಗ್ರೆಸ್ ನ ಯುವನಾಯಕರು, ಮೋದಿಜಿ, ನಿಮ್ಮ ಸಮಾಧಿಯನ್ನು ಅಗೆಯಲಾಗುತ್ತದೆ ಎಂದು ಹೇಳುವಷ್ಟರ ಮಟ್ಟಿಗೆ ಕೆಳಗಿಳಿಯುತ್ತಾರೆ. ಇಂತಹ ಮಾತುಗಳನ್ನು ಆಡುವ ಮೂಲಕ ಕಾಂಗ್ರೆಸ್ ನವರು ತಮ್ಮ ಸಮಾಧಿಯನ್ನು ತಾವೇ ಅಗೆಯುತ್ತಿದ್ದಾರೆ. ಕಾಂಗ್ರೆಸ್ ಕೆಸರು ಎಸೆದಷ್ಟೂ ಕಮಲ ಅರಳುತ್ತದೆ ಎಂದರು.

ಇತ್ತೀಚೆಗೆ, ಏರ್ ಇಂಡಿಯಾ ಬೋಯಿಂಗ್ ಮತ್ತು ಏರ್‌ಬಸ್‌ನೊಂದಿಗೆ 470 ವಿಮಾನಗಳಿಗೆ ಆದೇಶ ನೀಡಿದಾಗ ಇದು ವಾಯುಯಾನ ಉದ್ಯಮದಲ್ಲಿ ಅತಿದೊಡ್ಡ ಆರ್ಡರ್ ಆಗಿತ್ತು. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಏರೋಸ್ಪೇಸ್ ಮತ್ತು ಸಾಫ್ಟ್‌ವೇರ್ ಕಂಪನಿಗಳು ಸಹ ಈ ಆರ್ಡರ್ ನಿಂದ ಪ್ರಯೋಜನ ಪಡೆಯುತ್ತವೆ ಎಂದರು.

SCROLL FOR NEXT