ರಾಜಕೀಯ

ಶಾಸಕರ ಪುತ್ರನ ಲಂಚ ಪ್ರಕರಣ: ರಾಜೀನಾಮೆಗೆ ಪ್ರತಿಪಕ್ಷಗಳ ಬೇಡಿಕೆ, ತಳ್ಳಿ ಹಾಕಿದ ಸಿಎಂ ಬೊಮ್ಮಾಯಿ 

Nagaraja AB

 ಚಿತ್ರದುರ್ಗ: ಬಿಜೆಪಿ ಶಾಸಕ ಮಾಡಾಲ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಕುಮಾರ್ ಅವರಿಂದ ರೂ. 8.23 ಕೋಟಿ ನಗದು ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಬೇಡಿಕೆಯನ್ನು  ಸಿಎಂ ಬಸವರಾಜ ಬೊಮ್ಮಾಯಿ ಶನಿವಾರ ತಳ್ಳಿ ಹಾಕಿದ್ದು, ಕಾಂಗ್ರೆಸ್ ಬೇರೆ ಯಾವ ಕೆಲಸ ಇಲ್ಲ ಎಂದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಇಂತಹ 59 ಪ್ರಕರಣಗಳನ್ನು ಮುಚ್ಚಿಹಾಕಲೆಂದೆ ಭ್ರಷ್ಟಾಚಾರ ನಿಗ್ರಹ ದಳ ರಚಿಸುವ ಮೂಲಕ ಲೋಕಾಯುಕ್ತವನ್ನು ಕಾಂಗ್ರೆಸ್ ದುರ್ಬಲಗೊಳಿಸಿತ್ತು.  ತಮ್ಮ ಸರ್ಕಾರ ಲೋಕಾಯುಕ್ತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದು, ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸುತ್ತಿದೆ ಎಂದರು. 

ಪ್ರತಿಪಕ್ಷಗಳಿಗೆ ನಮ್ಮ ರಾಜೀನಾಮೆ ಬಿಟ್ಟರೆ ಬೇರೆ ಕೆಲಸವಿಲ್ಲ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಚಿವರೊಬ್ಬರ ಮನೆಯಲ್ಲಿ 2 ಲಕ್ಷ ರೂ. ಪತ್ತೆಯಾದಾಗ ಸಿಎಂ ಆಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ ಎಂಬುದನ್ನು ಕೇಳಬಯಸುತ್ತೇನೆ. 
ರಾಜ್ಯದಲ್ಲಿ ಬಲಿಷ್ಠ ಲೋಕಾಯುಕ್ತ ಇದ್ದಿದ್ದರೆ ಸಿದ್ದರಾಮಯ್ಯ ಅವರನ್ನು ಬಂಧಿಸಲಾಗುತ್ತಿತ್ತು ಎಂದೂ ಅವರು ಹೇಳಿದರು.

ತಮ್ಮ ಸರ್ಕಾರ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸಿದೆ ಎಂದು ಹೇಳಿದ ಅವರು ಪಕ್ಷ ಭೇದವಿಲ್ಲದೆ ಯಾರನ್ನೂ ಬಿಡುವುದಿಲ್ಲ. ಯಾರೇ ಇಂತಹ ಕೃತ್ಯ ಎಸಗಿದರೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಲೋಕಾಯುಕ್ತಕ್ಕೆ ಸ್ವಾತಂತ್ರ್ಯ ನೀಡಿದ್ದೇವೆ. ಕಾನೂನು ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಬೊಮ್ಮಾಯಿ ಹೇಳಿದರು.
 

SCROLL FOR NEXT