ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆ ದಿನಾಂಕವನ್ನು ಚುನಾವಣಾ ಆಯೋಗ ಪ್ರಕಟಿಸಲು ಇನ್ನು ಕೆಲವೇ ದಿನಗಳು ಬಾಕಿ. ಈ ಸಂದರ್ಭದಲ್ಲಿ ರಾಜ್ಯದ ಆಡಳಿತ ಪಕ್ಷ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ನಲ್ಲಿ ಟಿಕೆಟ್ ಹಂಚಿಕೆ ಬೇಗುದಿ ದಿನದಿಂದ ದಿನಕ್ಕೆ ಕಾವೇರುತ್ತಿದೆ.
ಮತ್ತೆ ಅಧಿಕಾರಕ್ಕೆ ಬರುವ ಹಪಾಹಪಿಯಲ್ಲಿ ಬಿಜೆಪಿ ಇದ್ದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಗಳೂ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಬಿಜೆಪಿಯಲ್ಲಿನ್ನೂ ಟಿಕೆಟ್ ಘೋಷಣೆ ಆಗಿಲ್ಲ. ಮೊದಲ ಪಟ್ಟಿ ಕೂಡ ಬಿಡುಗಡೆಯಾಗಿಲ್ಲ.
ಈ ಮಧ್ಯೆ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿರುವ ಬಿ.ಎಸ್ ಯಡಿಯೂರಪ್ಪನವರು ಇಂದು ಒಂದು ಹೇಳಿಕೆ ನೀಡಿದ್ದಾರೆ. ಈ ಬಾರಿ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಟಿಕೆಟ್ ನೀಡುವ ಮಾನದಂಡದ ಕುರಿತು ಸಾಕಷ್ಟು ಊಹಪೋಹಗಳು ಸೃಷ್ಟಿಯಾಗಿದ್ದು, ಈ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕಾರು ಮಂದಿ ಹಾಲಿ ಶಾಸಕರಿಗೆ ಟಿಕೆಟ್ ಸಿಗುವುದಿಲ್ಲ ಎಂದು ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇಂದು ಕಲಬುರಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಲ್ಕೈದು ಶಾಸಕರಿಗೆ ಟಿಕೆಟ್ ನೀಡುವುದನ್ನು ಕೈಬಿಟ್ಟು ಬೇರೆಯವರಿಗೆಲ್ಲ ಟಿಕೆಟ್ ಸಿಗಲಿದೆ ಎಂದು ಹೇಳಿದ್ದಾರೆ. ಇನ್ನು ಸಚಿವರಾದ ವಿ. ಸೋಮಣ್ಣ, ನಾರಾಯಯಣಗೌಡ ಅವರು ಪಕ್ಷ ಬಿಡುವ ಬಗ್ಗೆ ಮಾಹಿತಿ ಇಲ್ಲ. ಪಕ್ಷದಿಂದ ಹೋಗುವವರು ಹೋಗಬಹುದು. ಬರುವವರು ಬರಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಉಸ್ತುವಾರಿಗಾಗಿ ಪೈಪೋಟಿ: ಸಾಮ್ರಾಟ್- ಸೋಮಣ್ಣ ಜಟಾಪಟಿ; ವಿಜಯ ಸಂಕಲ್ಪಯಾತ್ರೆ ಅರ್ಧಕ್ಕೆ ಮೊಟಕುಗೊಳಿಸಿದ ಅಶೋಕ್!
ಬಿಜೆಪಿ ಪಕ್ಷಕ್ಕೆ ಯಾರು ಬರುತ್ತಾರೆ ಅವರಿಗೆ ಸ್ವಾಗತ. ಯಾರು ಪಕ್ಷ ಬಿಟ್ಟು ಹೋಗ್ತಾರೆ ಅವರು ಬಿಟ್ಟು ಹೋಗಬಹುದು. ನಾಲ್ಕೈದು ಹಾಲಿ ಶಾಸಕರನ್ನು ಬಿಟ್ಟು ಉಳಿದ ಎಲ್ಲಾ ಬಿಜೆಪಿ ಶಾಸಕರಿಗೆ ಟಿಕೆಟ್ ಕೊಡಲಾಗುವುದು. ಆದಷ್ಟು ಬೇಗ ಬಿಜೆಪಿ ಹುರಿಯಾಳುಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕನಿಷ್ಠ 140 ಸೀಟು ಗೆದ್ದು ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ. ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಗೆ ಜನ ಸೇರುತ್ತಿಲ್ಲ. ನಮ್ಮ ಯಾತ್ರೆಯಲ್ಲಿ ಉತ್ಸಾಹದಿಂದ ಜನರು ಸೇರುತ್ತಿದ್ದಾರೆ. ವಾತಾವರಣ ಬಿಜೆಪಿಗೆ ಅನುಕೂಲಕರವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಮತ್ತಿತರ ನಾಯಕರ ಭೇಟಿಯು ಬಿಜೆಪಿ ಬಲವನ್ನು ಹೆಚ್ಚಿಸಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕದ 41 ರಲ್ಲಿ 30 ಸ್ಥಾನ ನಾವು ಗೆದ್ದೇ ಗೆಲ್ಲುತ್ತೇವೆ. ಕಾಂಗ್ರೆಸ್ ನಾಯಕರು ಟೀಕೆ ಮಾಡುವುದರಲ್ಲಿ ಸಮಯ ಕಳೆಯುತ್ತಿದ್ದಾರೆ ಎಂದರು. ರಮೇಶ್ ಕುಮಾರ್ ನಾವು ಸಾಕಷ್ಟು ಮಾಡಿಕೊಂಡು ತೃಪ್ತಿಯಲ್ಲಿದ್ದೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಇದಕ್ಕೆ ಡಿಕೆಶಿ ಮತ್ತು ಸಿದ್ದರಾಮಯ್ಯ ಉತ್ತರ ಕೊಡಬೇಕು. ಕಾಂಗ್ರೆಸ್ ಪ್ರಜಾಧ್ವನಿಗೆ ಜನ ಸೇರುತ್ತಿಲ್ಲ ನಮ್ಮ ಯಾತ್ರೆಗೆ ಸಾಕಷ್ಟು ಜನ ಆಗಮಿಸುತ್ತಿದ್ದಾರೆ. ಹೀಗಾಗಿ ಬಿಜೆಪಿ ಪರ ವಾತಾರವರಣವಿದ್ದು 140 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಿಎಂ ಕಿಸಾನ್ ಸಮ್ಮಾನ್ ನಿಧಿಯಡಿ 54 ಲಕ್ಷ ರೈತರಿಗೆ ಪ್ರಯೋಜನ ಸಿಗುತ್ತಿದೆ. ಭೂಸಿರಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ರೈತ ಶಕ್ತಿ ಯೋಜನೆಯಡಿ ಡೀಸೆಲ್ ಸಬ್ಸಿಡಿ ನೀಡುತ್ತಿದ್ದು, ಕೂಲಿ ಕಾರ್ಮಿಕ ಮಹಿಳೆಯರಿಗೆ 1 ಸಾವಿರ ಕೊಡುವ ಘೋಷಣೆ ಮಾಡಿದ್ದೇವೆ ಎಂದ ಅವರು ಕೇಂದ್ರ- ರಾಜ್ಯ ಸರಕಾರಗಳ ಜನಪರ ಯೋಜನೆಗಳ ವಿವರ ಕೊಟ್ಟರು.
ಮೀಸಲಾತಿ ಹೆಚ್ಚಳದ ಕುರಿತು ಮಾಹಿತಿ ನೀಡಿದರಲ್ಲದೆ, ಬಿಜೆಪಿ ಗೆಲುವು ಶತಸ್ಸಿದ್ಧ ಎಂದರು. ದಾವಣಗೆರೆಯಲ್ಲಿ ವಿಜಯಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭ ನಡೆಯಲಿದೆ. ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಸವಕಲ್ಯಾಣ ಇಡೀ ದೇಶ ಗಮನ ಸೇಳೆಯುವ ಸ್ಥಳ ಆಗಬೇಕು ಎನ್ನುವುದು ನಮ್ಮ ಅಪೇಕ್ಷೆ. ಕಲ್ಯಾಣ ಕರ್ನಾಟಕ ದಲ್ಲಿ ಪ್ರತ್ಯೇಕ ಸಚಿವಾಲಯದ ಬಗ್ಗೆ ಚರ್ಚೆ ಮಾಡುವೆ ಎಂದು ಹೇಳಿದರು.
ರಾಹುಲ್ ಗಾಂಧಿ ದೇಶದ ಮುಂದೆ ಕ್ಷಮೆಯಾಚಿಸಬೇಕು: ರಾಹುಲ್ ಗಾಂಧಿಯವರು ಹೊರದೇಶಕ್ಕೆ ಹೋಗಿ ಭಾರತದ ಬಗ್ಗೆ ಹಗುರವಾಗಿ ಮಾತನಾಡುವುದು ಇದು ಮೊದಲಲ್ಲ. ಇದು ಶೋಭೆ ತರುವ ವಿಚಾರವಲ್ಲ. ಅವರು ದೇಶದ ಜನರ ಮುಂದೆ ಕ್ಷಮೆ ಯಾಚಿಸಬೇಕು ಎಂದು ಬಿ ಎಸ್ ಯಡಿಯೂರಪ್ಪ ಒತ್ತಾಯಿಸಿದರು.
ವಿಜಯೇಂದ್ರಗೆ ಶಿಕಾರಿಪುರ ಉತ್ತಮ: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪುತ್ರ ಬಿ ವೈ ವಿಜಯೇಂದ್ರ ಸ್ಪರ್ಧೆ ವಿಚಾರದ ಕುರಿತು ಮಾತನಾಡಿ, ಕೇಂದ್ರದ ನಾಯಕರು ಎಲ್ಲಿ ಹೇಳುತ್ತಾರೆ ಅಲ್ಲಿ ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ. ಶಿಕಾರಿಪುರ ಆಗಬಹುದು ಅಥವಾ ಬೇರೆ ಕ್ಷೇತ್ರವಾದರೂ ಆಗಬಹುದು. ಶಿಕಾರಿಪುರದಲ್ಲಿ ನಿಲ್ಲಬಹುದು ಅಂತಾ ನನ್ನ ಅನಿಸಿಕೆ ಎಂದರು.