ರಾಜಕೀಯ

ಸರ್ಕಾರದ ಸಹಾಯ ಇಲ್ಲದೆ ಮಾಡಾಳ್ ಗೆ ಒಂದೇ ದಿನದಲ್ಲಿ ಜಾಮೀನು ಸಿಗಲು ಹೇಗೆ ಸಾಧ್ಯ?: ಕಾಂಗ್ರೆಸ್

Lingaraj Badiger

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರು ಲೋಕಾಯುಕ್ತ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ದಿನದಲ್ಲಿ ಹೈಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಪಡೆದಿರುವ ವಿಚಾರ ಸಂಬಂಧಿಸಿದಂತೆ ಪ್ರತಿಪಕ್ಷ ಕಾಂಗ್ರೆಸ್ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಅವರ ಕಚೇರಿ ಹಾಗೂ ನಿವಾಸದಲ್ಲಿ ಸುಮಾರು 8 ಕೋಟಿಯಷ್ಟು ಅಕ್ರಮ ಹಣ ಸಿಕ್ಕಿದೆ. ಈ ಪ್ರಕರಣದಲ್ಲಿ ಶಾಸಕರಿಗೆ ಒಂದೇ ದಿನದಲ್ಲಿ ಜಾಮೀನು ಸಿಕ್ಕಿದೆ.

ಸರ್ಕಾರ ಹಾಗೂ ಸರ್ಕಾರಿ ವಕೀಲರ ಬೆಂಬಲ ಇಲ್ಲವಾದರೆ ಕೇವಲ ಒಂದೇ ದಿನದಲ್ಲಿ ಜಾಮೀನು ಸಿಗಲು ಹೇಗೆ ಸಾಧ್ಯ? ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ.

ಒಂದೇ ದಿನಕ್ಕೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಕ್ಕಿದೆ. ಈ ಪ್ರಕರಣ ಬಗ್ಗೆ ವಕೀಲರ ಸಂಘದವರು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ನ್ಯಾಯಾಂಗದ ಪ್ರಕ್ರಿಯೆ ಬಗ್ಗೆಯೂ ಉಲ್ಲೇಖ ಮಾಡಿದ್ದಾರೆ. ಮಾಡಾಳ್​ಗೆ ಜಾಮೀನು ಕೊಡಿಸುವಲ್ಲಿ ಸರ್ಕಾರ ಸಹ ಶಾಮೀಲಾಗಿದೆ. ವಿರೋಧ ಪಕ್ಷದವರಿಗೆ ಜಾಮೀನಿಗಾಗಿ ತಿಂಗಳುಗಟ್ಟಲೇ ಅಲೆಯಬೇಕು. ಆದರೆ ಬಿಜೆಪಿ ಶಾಸಕ ವಿರೂಪಾಕ್ಷಪ್ಪಗೆ ಒಂದೇ ದಿನದಲ್ಲಿ ಬೇಲ್ ಸಿಕ್ಕಿದೆ ಎಂದು ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

ಲೋಕಾಯುಕ್ತ ದಾಳಿ ವೇಳೆ ಮಾಡಾಳ್ ವಿರೂಪಾಕ್ಷಪ್ಪ ಅವರ ಮನೆಯಲ್ಲಿ 8 ಕೋಟಿಗೂ ಹೆಚ್ಚು ನಗದು ಸಿಕ್ಕಿದೆ. ತಾವು ಅಧ್ಯಕ್ಷರಾಗಿರೋ ನಿಗಮದಲ್ಲೇ ಡೀಲ್‌ ನಡೆದಿದೆ. ಶಾಸಕರ ಪುತ್ರ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿ ಜೈಲು ಸೇರಿದ್ದಾನೆ. ಇದೇ ಕೇಸ್‌ನಲ್ಲಿ ಎ1 ಆರೋಪಿಯಾಗಿರೋ ಬಿಜೆಪಿ ಶಾಸಕ ಮಾಡಾಳ್‌ ಅವರು ಇಷ್ಟು ದಿನ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಆದರೆ ನಿನ್ನೆ ಜಾಮೀನು ಸಿಗುತ್ತಿದ್ದಂತೆ ಚನ್ನಗಿರಿ ತಾಲೂಕಿನ ಸ್ವಗ್ರಾಮ ಚನ್ನೇಶಪುರದಲ್ಲಿ ಪ್ರತ್ಯಕ್ಷರಾಗಿದ್ದರು.

SCROLL FOR NEXT