ರಾಜಕೀಯ

ಬೆಳಗಾವಿ: ಬಿಜೆಪಿ ಭಿನ್ನಮತ ಶಮನಕ್ಕೆ ಯತ್ನ, ನಾಯಕರೊಂದಿಗೆ ಧರ್ಮೇಂದ್ರ ಪ್ರಧಾನ್ ಸಭೆ

Manjula VN

ಬೆಳಗಾವಿ: ಸ್ಥಳೀಯ ಬಿಜೆಪಿ ನಾಯಕರ ನಡುವೆ ಭಿನ್ನಾಭಿಪ್ರಾಯಗಳು ಹೆಚ್ಚಾಗಿದ್ದು, ಈ ನಡುವಲ್ಲೇ ಡ್ಯಾಮೇಜ್ ಕಂಟ್ರೋಲ್'ಗೆ ಬಿಜೆಪಿ ಮುಂದಾಗಿದೆ.

ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿದ ಪಕ್ಷದ ರಾಜ್ಯ ಚುನಾವಣೆ ಉಸ್ತುವಾರಿಯೂ ಆಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರು, ಭಾನುವಾರ ಬಾಗಲಕೋಟೆ, ಬೆಳಗಾವಿ, ಹಾಗೂ ವಿಜಯಪುರ ಜಿಲ್ಲೆಗಳ ಆಯ್ದ ಸಂಸದರು, ಶಾಸಕರೊಂದಿಗೆ ಪ್ರತ್ಯೇಕವಾಗಿ ಸಭೆ ನಡೆಸಿದರು.

ಪ್ರಸ್ತುತದ ರಾಜಕೀಯ ಸನ್ನಿವೇಶ ಹಾಗೂ ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆಯೂ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಈ ಮೂರು ಜಿಲ್ಲೆಗಳ ಬಹುತೇಕ ಶಾಸಕರು ಮತ್ತು ಸಂಸದರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಅಭಿಪ್ರಾಯ ಹಂಚಿಕೊಂಡರು ಎಂದು ತಿಳಿದುಬಂದಿದೆ.

ಕಾಂಗ್ರೆಸ್ ನಿಂದ ಬಿಜೆಪಿಗೆ ವಲಸೆ ಬಂದಿರುವ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹಾಗೂ ಬಿಜೆಪಿಯ ಇತರ ನಾಯಕರ ನಡುವಿನ ಭಿನ್ನಾಭಿಪ್ರಾಯ ಬಹಿರಂಗ ರಹಸ್ಯವಾಗಿದೆ.

ಮೂಲಗಳ ಪ್ರಕಾರ, ಬಿಜೆಪಿಯ ಬಹುತೇಕ ಶಾಸಕರು ಬೇರೆ ಕ್ಷೇತ್ರಗಳಲ್ಲಿ ರಮೇಶ್ ಜಾರಕಿಹೊಳಿ ಹಸ್ತಕ್ಷೇಪ ಹೆಚ್ಚುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಜಾರಕಿಹೊಳಿ ಅವರು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಇದು ಪಕ್ಷ ಸಂಘಟನೆಗೆ ಸಮಸ್ಯೆ ಸೃಷ್ಟಿಸುತ್ತಿದೆ ಎಂದು ದೂರಿದ್ದಾರೆಂದು ಮೂಲಗಳು ತಿಳಿಸಿವೆ.

ಇದೇ ಸಭೆಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನೂ ಧರ್ಮೇಂದ್ರ ಪ್ರಧಾನ್ ಅವರು ಭೇಟಿ ಮಾಡಿದ್ದು, ಈ ವೇಳೆ ರಮೇಶ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ತಿಳಿದುಬಂದಿದೆ.

ಎಲ್ಲರ ಅಭಿಪ್ರಾಯಗಳನ್ನು ಸಂಗ್ರಹಿಸಿದ ಬಳಿಕ ಪ್ರತಿಕ್ರಿಯೆ ನೀಡಿದ ಪ್ರಧಾನ್ ಅವರು, ಮತ್ತೊಮ್ಮೆ ಬೆಳಗಾವಿಗೆ ಭೇಟಿ ನೀಡಿ ಸಭೆ ನಡೆಸುವುದಾಗಿ ಹೇಳಿದರು.

ಬಿಜೆಪಿ ನಾಯಕರ ನಡುವೆ ದಿನದಿಂದ ದಿನಕ್ಕೆ ಭಿನ್ನಾಭಿಪ್ರಾಯಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ್ ಅವರ ದಿಢೀರ್ ಭೇಟಿ ಮತ್ತು ಬಿಜೆಪಿ ನಾಯಕರೊಂದಿಗಿನ ಏಕಾಏಕಿ ಭೇಟಿ ಮಹತ್ವ ಪಡೆದುಕೊಂಡಿದೆ.

ಈ ನಡುವೆ ಬೆಳಗಾವಿಯಲ್ಲಿ ನಡೆಯಲಿರುವ ಬೆಳವಣಿಗೆಗಳ ಬಗ್ಗೆ ವರಿಷ್ಠರ ಮುಂದಿನ ನಡೆ ಬಗ್ಗೆ ಪಕ್ಷದ ಕಾರ್ಯಕರ್ತರಲ್ಲಿ ಕುತೂಹಲ ಮೂಡಿದೆ.

SCROLL FOR NEXT