ರಾಜಕೀಯ

ಮಗನಿಗಾಗಿ ಶಿಕಾರಿಪುರ ಕ್ಷೇತ್ರ ತ್ಯಾಗ: ಬಿಎಸ್ ವೈ ಹೇಳಿಕೆಗೆ ಸಿಟಿ ರವಿ ಕೆಂಡ!

Nagaraja AB

ವಿಜಯಪುರ: ಶಿಕಾರಿಪುರ ವಿಧಾನಸಭಾ ಕ್ಷೇತ್ರವನ್ನು ತನ್ನ ಮಗನಿಗಾಗಿ ಬಿಟ್ಟು ಕೊಡುವುದಾಗಿ ಬಿಎಸ್ ಯಡಿಯೂರಪ್ಪ ಘೋಷಿಸಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ಷೇಪಿಸಿದ್ದಾರೆ. ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಮನೆಯಲ್ಲಿ ನಿರ್ಧಾರವಾಗಲ್ಲ ಎಂದಿದ್ದಾರೆ. 

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿ.ಟಿ.ರವಿ, ಟಿಕೆಟ್ ನೀಡುವ ಬಗ್ಗೆ ಕುಟುಂಬದಲ್ಲಿ ತೀರ್ಮಾನವಾಗುವುದಿಲ್ಲ, ಸಂಸದೀಯ ಮಂಡಳಿ ಸಭೆಯಲ್ಲಿ ನಿರ್ಧರಿಸಲಾಗುತ್ತದೆ.ನಮ್ಮ ಪಕ್ಷದಲ್ಲಿ ಕಿಚನ್ ನಲ್ಲಿ ತೀರ್ಮಾನ ತೆಗೆದುಕೊಳ್ಳಲ್ಲ. ನಾಯಕರ ಮಕ್ಕಳೆಂದ ಕಾರಣಕ್ಕೆ ಅವರಿಗೆ ಟಿಕೆಟ್ ಸಿಕ್ಕಲ್ಲ. ಈಗ ವಿಜಯೇಂದ್ರ ಬಗ್ಗೆ ಕೇಳಿದ್ದೀರಿ. ಅವರಿಗೆ ಟಿಕೆಟ್ ನೀಡುವ ನಿರ್ಧಾರವನ್ನು ಸಂಸದೀಯ ಮಂಡಳಿ ತೆಗೆದುಕೊಳ್ಳುತ್ತದೆ. ಸಮೀಕ್ಷೆಯ ಆಧಾರದ ಮೇಲೆ ಗೆಲ್ಲುವ ಮಾನದಂಡದ ಆಧರಿಸಿ ಟಿಕೆಟ್ ನೀಡುವ ಕುರಿತು ನಿರ್ಧರಿಸಲಾಗುತ್ತದೆ. ಆದರೆ ಕುಟುಂಬದಲ್ಲಿ ಸಮೀಕ್ಷೆ ನಡೆಯುವುದಿಲ್ಲ ಎಂದರು.

ಇಡೀ ಪಕ್ಷ ಮತ್ತು ಇಡೀ ಸರ್ಕಾರವನ್ನು ಮನವರಿಕೆ ಮಾಡಿ ಟಿಕೆಟ್ ಪಡೆಯಲು ಸಾಧ್ಯವಿಲ್ಲ, ಇಂದಿರಾ ಗಾಂಧಿ ಅವರ ಮಗ ರಾಜೀವ್ ಗಾಂಧಿ ಹೇಗೆ ಪ್ರಧಾನಿಯಾದರೋ, ಅಂತಹ ಅವಕಾಶ ಇಲ್ಲಿ ನಡೆಯುವುದಿಲ್ಲ, ಟಿಕೆಟ್ ನೀಡುವ ನಿರ್ಧಾರ ಕುಟುಂಬದಲ್ಲಿ ಆಗಲ್ಲ ಎಂದು ಸಿಟಿ ರವಿ ಹೇಳಿದರು. 

ಇತ್ತೀಚಿಗೆ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶದಲ್ಲಿ ತಾನು ಚುನಾವಣಾ ರಾಜಕೀಯದಿಂದ ನಿವೃತ್ತರಾದ ನಂತರ ತಮ್ಮ ಕಿರಿಯ ಪುತ್ರ ವಿಜಯೇಂದ್ರ ಅವರು 2023 ರ ಚುನಾವಣೆಯಲ್ಲಿ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಹೇಳಿದ್ದರು. 

SCROLL FOR NEXT