ರಾಜಕೀಯ

ಮೈಕ್ ನಲ್ಲಿ ಕೂಗಿದರೆ ಮಾತ್ರ ಅಲ್ಲಾಗೆ ಕಿವಿ ಕೇಳೋದಾ?: ಹೇಳಿಕೆ ಸಮರ್ಥಿಸಿಕೊಂಡ ಈಶ್ವರಪ್ಪ

Manjula VN

ಮಂಗಳೂರು: ಮೈಕ್ ನಲ್ಲಿ ಕೂಗಿದರೆ ಮಾತ್ರವೇ ಅಲ್ಲಾಗೆ ಕಿವಿ ಕೇಳೋದಾ ಎಂಬ ತಮ್ಮ ಹೇಳಿಕೆ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟನೆ ನೀಡಿದ್ದು, ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಜಾನ್‌ ನಿಷೇಧ ಕುರಿತು ಮಾತನಾಡುವಾಗ ಹೀಗೆ ಹೇಳಿದ್ದು ನಿಜ. ಆದರೆ, ಇದು ಧಾರ್ಮಿಕ ನಿಂದನೆಯಲ್ಲ. ನಾನು ಯಾವುದೇ ಧರ್ಮಕ್ಕೂ ಅಗೌರವ ತೋರಿಸಿಲ್ಲ. ಆಜಾನ್ ನಲ್ಲಿ ಬಳಸುವ ಧ್ವನಿವರ್ಧಕಗಳಿಂದ ಜನರಿಗೆ ಸಮಸ್ಯೆಯಾಗುತ್ತವೆ. ಪ್ರಮುಖವಾಗಿ ಪರೀಕ್ಷೆಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳು ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುವ ರೋಗಿಗಳಿಗೆ ಸಮಸ್ಯೆ ನೀಡುತ್ತವೆ ಎಂದು ಹೇಳಿದ್ದಾರೆ.

ಮುಸ್ಲಿಂ ಸಮುದಾಯದ ಮುಖಂಡರು ಈ ಬಗ್ಗೆ ಚಿಂತನೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ತಿಳಿಸಿದರು. ಇದೇ ವೇಳೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಪಕ್ಷವು ಮುಸ್ಲಿಂ ರಾಷ್ಟ್ರೀಯವಾದಿಗಳ ಮತಗಳನ್ನು ಮಾತ್ರ ಬಯಸುತ್ತದೆ ಎಂದರು.

ಮುಸ್ಲಿಮರ ಮತಗಳು ಬೇಡ ಎಂದು ಬಿಜೆಪಿ ಎಂದಿಗೂ ಹೇಳಿಲ್ಲ. ನಾವು ರಾಷ್ಟ್ರೀಯವಾದಿಗಳಾದ ಮುಸ್ಲಿಮರ ಮತಗಳನ್ನು ಬಯಸುತ್ತೇವೆ" ಎಂದು ಹೇಳಿದರು.

ಬಳಿಕ ಭ್ರಷ್ಟಾಚಾರ ಆರೋಪ ಕುರಿತು ಮಾತನಾಡಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಆದ ಭ್ರಷ್ಟಾಚಾರವನ್ನು ಮರೆಮಾಚಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಭ್ರಷ್ಟಾಚಾರ ಪ್ರಕರಣದಲ್ಲಿ ಜಾಮೀನು ಸಿಕ್ಕಾಗ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಸಾರ್ವಜನಿಕವಾಗಿ ವಿಜಯೋತ್ಸವ ಮೆರವಣಿಗೆ ನಡೆಸಿರುವುದಕ್ಕೆ ಪ್ರೇರಣೆ ನೀಡಿದ್ದೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌. ತಿಹಾರ್‌ ಜೈಲಿನಿಂದ ಬಿಡುಗಡೆಯಾಗಿದ್ದ ಡಿಕೆಶಿ ಅವರನ್ನು ಅವರ ಪಕ್ಷದ ಬೆಂಬಲಿಗರು ವಿಮಾನನಿಲ್ದಾಣದಿಂದ ಮೆರವಣಿಗೆಯಲ್ಲಿ ಕರೆ ತಂದಿದ್ದರು. ಮಾಡಾಳ್‌ ವಿರೂಪಾಕ್ಷಪ್ಪ ಈ ರೀತಿ ಮಾಡಿದ್ದು ತಪ್ಪು. ಬಿಜೆಪಿಯ ಕೇಂದ್ರ ಮತ್ತು ರಾಜ್ಯ ನಾಯಕರು ಸ್ಪಷವಾಗಿ ಇದನ್ನು ಟೀಕೆ ಮಾಡಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ ಮೆರವಣಿಗೆ ಮಾಡಿದ್ದಾಗ ಕಾಂಗ್ರೆಸ್‌ ನಾಯಕರು ಒಬ್ಬರಾದರೂ ಅದನ್ನು ತಪ್ಪು ಅಂತ ಹೇಳಿದ್ದರೇ’ ಎಂದು ಪ್ರಶ್ನಿಸಿದರು.

ಬಳಿಕ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂದು ವಿಶ್ವಾರ ವ್ಯಕ್ತಪಡಿಸಿದ ಅವರು, ಪಕ್ಷದ ನಾಯಕತ್ವವೇ ಅಭ್ಯರ್ಥಿಗಳ ಕುರಿತು ಅಂತಿಮ ನಿರ್ಧಾಕ ಕೈಗೊಳ್ಳಲಿದೆ ಎಂದು ಹೇಳಿದರು.

SCROLL FOR NEXT