ರಾಜಕೀಯ

ಉತ್ಸವ ಮೂರ್ತಿಯಾಗಿದ್ದ ಯಡಿಯೂರಪ್ಪ, ವಿಸರ್ಜನಾ ಮೂರ್ತಿಯಾದರೇ? ದಶಪಥವಲ್ಲ ಭ್ರಷ್ಟಪಥ!

Shilpa D

ಬೆಂಗಳೂರು: ಲಿಂಗಾಯತ ಸಮುದಾಯದ ಮತಗಳಿಗಾಗಿ ಉತ್ಸವ ಮೂರ್ತಿಯಾಗಿದ್ದ ಯಡಿಯೂರಪ್ಪನವರು, ವಿಸರ್ಜನಾ ಮೂರ್ತಿಯಾದರೇ? ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಯಡಿಯೂರಪ್ಪನವರ ಸ್ಥಾನ ಮತ್ತು ಮಾನ ಎರಡನ್ನೂ ಕಾಲ ಕೆಳಗಿನ ಕಸದಂತೆ ಕಾಣುತ್ತಿದೆ ಬಿಜೆಪಿ. ಟಿಕೆಟ್ ನಿರ್ಧರಿಸುವ ಹಕ್ಕು, ಸ್ವತಂತ್ರ ಯಡಿಯೂರಪ್ಪ ಅವರಿಗಿಲ್ಲ ಎನ್ನುವ ಮೂಲಕ ಬಿಎಸ್‌ವೈ ಮುಕ್ತ ಬಿಜೆಪಿ ಅಭಿಯಾನವನ್ನ ಅಧಿಕೃತಗೊಳಿಸಿದ್ದಾರೆ ಸಿ.ಟಿ ರವಿ. ಲಿಂಗಾಯತರ ಮತಕ್ಕಾಗಿ ಉತ್ಸವ ಮೂರ್ತಿಯಾಗಿದ್ದ ಬಿಎಸ್‌ವೈ ಇಷ್ಟು ಬೇಗ ವಿಸರ್ಜನಾ ಮೂರ್ತಿಯಾದರೆ?' ಎಂದು ಕಾಂಗ್ರೆಸ್‌ ಟ್ವೀಟ್‌ ಮಾಡಿದೆ.

ಟಿಕೆಟ್‌ ಯಾರಿಗೆ ನೀಡಬೇಕು ಎಂದು ನಿರ್ಧಾರ ಮಾಡುವುದು ಪಕ್ಷವೇ ಹೊರೆತು ಯಡಿಯೂರಪ್ಪನವರು ಅಲ್ಲ ಎನ್ನುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಲೇವಡಿ ಮಾಡಿದೆ.

ಸಿ.ಟಿ ರವಿ ಅವರ ಹೇಳಿಕೆಯ ವರದಿಯ ಪ್ರತಿಯನ್ನು ಲಗತ್ತಿಸಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಯಡಿಯೂರಪ್ಪನವರ ಸ್ಥಾನ ಮತ್ತು ಮಾನ ಎರಡನ್ನೂ ಬಿಜೆಪಿ ಕಾಲ ಕಸದಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದೆ.

ಒಂದು ವರ್ಷವಾದರೂ ಬಾಳಿಕೆ ಬರಬೇಕಿತ್ತು, ಒಂದು ತಿಂಗಳು, ಕೊನೆ ಪಕ್ಷ ಒಂದು ವಾರವಾದರೂ ಬಾಳಿಕೆ ಬರಬೇಕಿತ್ತು. ಆದರೆ ಉದ್ಘಾಟನೆಯಾದ ಒಂದೇ ದಿನಕ್ಕೆ ಕಿತ್ತು ಹೋಗಿದೆ, ರಾಜ್ಯದ 40% ಕೇಂದ್ರದ 40%, ಒಟ್ಟು 80% ಕಮಿಷನ್ ಕಾಮಗಾರಿಯ ಬಂಡವಾಳ ಹೊರಬಂದಿದೆ. ದಶಪಥವಲ್ಲ ಇದು ಭ್ರಷ್ಟಪಥ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.

ಕಿತ್ತುಹೋದ ರಸ್ತೆ ದುರಸ್ತಿ ಕಾಮಗಾರಿಯ ಗುದ್ದಲಿ ಪೂಜೆಗೆ ಮತ್ತೊಮ್ಮೆ ಮೋದಿಯನ್ನು ಕರೆಸಿ. ದುರಸ್ತಿಯಾದ ನಂತರ ಉದ್ಘಾಟನೆಗೆ ಇನ್ನೊಮ್ಮೆ ಮೋದಿ ಕರೆಸಿ. ಗುಂಡಿ ಮುಚ್ಚಿದ ಸಂತೋಷಕ್ಕಾಗಿ ಮಗದೊಮ್ಮೆ ಮೋದಿ ಕರೆಸಿ ರೋಡ್ ಶೋ ಮಾಡಿಸಿ. ಆಗಬಹುದೇ ಎಂದು ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.

SCROLL FOR NEXT