ರಾಜಕೀಯ

ಬಿಜೆಪಿಯಲ್ಲಿ ವ್ಯವಸ್ಥಿತವಾಗಿ ಲಿಂಗಾಯತ ನಾಯಕರ ಮೂಲೆಗುಂಪು: ಕಾಂಗ್ರೆಸ್ ಟೀಕೆ

Nagaraja AB

ಬೆಂಗಳೂರು: ಬಿಜೆಪಿಯಲ್ಲಿ ವ್ಯವಸ್ಥಿತವಾಗಿ ಲಿಂಗಾಯತ ನಾಯಕರು ಮೂಲೆಗೆ ತಳ್ಳಲಾಗುತ್ತಿದೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಗುರುವಾರ ಟೀಕಿಸಿದೆ. ಈ ಕುರಿತು ರಾಜ್ಯ ಕಾಂಗ್ರೆಸ್ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಲಾಗಿದ್ದು, ಜಗದೀಶ್ ಶೆಟ್ಟರ್, ಬಿಎಸ್ ಯಡಿಯೂರಪ್ಪ, ಸೋಮಣ್ಣ, ಬೊಮ್ಮಾಯಿ ಅವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದು ಹೇಳಿದೆ.

ಶೆಟ್ಟರ್‌‌ಗೆ ಅವರ ಕ್ಷೇತ್ರದಲ್ಲೇ ವೇದಿಕೆಗೆ ಆಹ್ವಾನವಿರಲಿಲ್ಲ, ಬಿಎಸ್ ವೈ ಅವರಿಗೆ ಪ್ರಚಾರ ಸಮಿತಿಯ ನೇತೃತ್ವವಿಲ್ಲ, ಸೋಮಣ್ಣ ಅತಂತ್ರವಾಗಿದ್ದು, ಬೊಮ್ಮಾಯಿ ಅವರ ಹೆಸರೇ ಹೇಳುತ್ತಿಲ್ಲ, ಇದೆಲ್ಲವೂ ಜೋಶಿ, ಸಂತೋಷ್ ಅವರ ತಂತ್ರವೇ ಎಂದು ರಾಜ್ಯ ಬಿಜೆಪಿಯನ್ನು ಪ್ರಶ್ನಿಸಿದೆ. 

ಬೊಮ್ಮಾಯಿಅವರಿಗೆ ನಾಯಕತ್ವ ಕೊಡುವುದಿರಲಿ, ಟಿಕೆಟ್ ಕೊಡುವುದೇ ಅನುಮಾನವಂತೆ! ಸಂಸದ ಸಿದ್ದೇಶ್ ಹೇಳಿದ್ದಕ್ಕೂ ಅಮಿತ್ ಶಾ ಸಿಎಂ ಹೆಸರನ್ನೇ ಪ್ರಸ್ತಾಪ ಮಾಡದಿರುವುದಕ್ಕೂ ಸಂಬಂಧವಿದೆಯೇ?  ಬೊಮ್ಮಾಯಿಯವರ ವೈಫಲ್ಯ, ಭ್ರಷ್ಟಾಚಾರವು ಟಿಕೆಟ್ ನಿರಾಕರಿಸುವಷ್ಟು ಅಸಹನೆ ಹುಟ್ಟಿಸಿದೆಯೇ? ಜನಾಕ್ರೋಶ ಹೈಕಮಾಂಡಿಗೆ ಅರ್ಥವಾಗಿದೆಯೇ? ಎಂದು ಆಡಳಿತಾರೂಢ ಪಕ್ಷವನ್ನು ಪ್ರತಿಪಕ್ಷ ಕೇಳಿದೆ. 

ಮತ್ತೊಂದು ಟ್ವೀಟ್ ನಲ್ಲಿ ಬಿಎಸ್ ವೈ  ಟೀಕಿಸಲೆಂದು ಒಂದು ತಂಡವನ್ನೇ "ಸಂತೋಷ ಕೂಟ" ತಯಾರು ಮಾಡಿದೆ. ಆ ತಂಡದ ಪ್ರಮುಖ ವಕ್ತಾರರು ಯತ್ನಾಳ್, ಸಿಟಿ ರವಿ! ಬಿಜೆಪಿಯಲ್ಲಿ ಬಿಎಸ್ ವೈ ನಾಯಕತ್ವವನ್ನು ಪ್ರಶ್ನಿಸುತ್ತಿರುವವರು ಯಾರು? ವಿಜಯೇಂದ್ರ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ? ಯಡಿಯೂರಪ್ಪರನ್ನು ಮೂಲೆಗುಂಪು ಮಾಡಲು ಶತಪ್ರಯತ್ನ ನಡೆಸುತ್ತಿರುವವರು ಯಾರು ಎಂದು ಪ್ರಶ್ನಿಸಲಾಗಿದೆ.

ಬಿಎಸ್ ಯಡಿಯೂರಪ್ಪ ಅವರಿಗೆ  ಅಧಿಕಾರವಿಲ್ಲ, ಟಿಕೆಟ್ ಕೂಡ ಇಲ್ಲ, ಟಿಕೆಟ್ ನಿರ್ಧರಿಸುವ ಹಕ್ಕಿಲ್ಲ, ಪ್ರಚಾರ ಸಮಿತಿಯ ನೇತೃತ್ವವಿಲ್ಲ, ವೇದಿಕೆಗಳಲ್ಲಿ ಜಾಗವಿಲ್ಲ, ರಾಜ್ಯ ಪ್ರವಾಸಕ್ಕೆ ಅವಕಾಶ ಕೊಡದಿರುವುದು ಬಿಜೆಪಿಗೆ ಅವರು ಅನಿವಾರ್ಯವಲ್ಲ ಎಂದ ಕಟೀಲ್ ಹೇಳಿಕೆಗೆ ಸ್ಪೂರ್ತಿಯೇ ಎಂದು ರಾಜ್ಯ ಬಿಜೆಪಿಯನ್ನು ಕೇಳಿದೆ. 
 

SCROLL FOR NEXT