ಹುಬ್ಬಳ್ಳಿ: ಜನರಿಗೆ ನೀಡುತ್ತಿರುವ ಭರವಸೆಗಳನ್ನು ಈಡೇರಿಸಲು ವಿಫಲವಾಗಿದ್ದೇ ಆದರೆ, ಅಧಿಕಾರದಿಂದ ಕೆಳಗಿಳಿಯುತ್ತೇವೆಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬುಧವಾರ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಕ್ಕೆ ಬಂದರೆ ಜೂನ್ ಅಥವಾ ಜುಲೈ ತಿಂಗಳಿನಿಂದಲೇ ಪಕ್ಷ ನೀಡುತ್ತಿರುವ ಎಲ್ಲಾ ಭರವಸೆಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.
200 ಯೂನಿಟ್ ಉಚಿತ ವಿದ್ಯುತ್, ಪ್ರತಿ ಕುಟುಂಬದ ಮಹಿಳೆಗೆ 2,000 ರೂ ಮತ್ತು ಪ್ರತಿ ಮನೆಗೆ 10 ಕೆಜಿ ಉಚಿತ ಅಕ್ಕಿ ಎಂಬ ಮೂರು ಯೋಜನೆಗಳಿಗೆ ಈಗಾಗಲೇ ಕಾಂಗ್ರೆಸ್ ವೆಚ್ಚದ ಲೆಕ್ಕಾಚಾರ ಮಾಡಿದೆ. ಇನ್ನೆರಡು ಭರವಸೆಗಳನ್ನು ಶೀಘ್ರದಲ್ಲೇ ಘೋಷಣೆ ಮಾಡಲಾಗವುದು ಎಂದು ತಿಳಿಸಿದರು.
ಈಗಾಗಲೇ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನಗೊಳಿಸಲು ವಾರ್ಷಿಕ ಸುಮಾರು 40,000 ಕೋಟಿ ರೂ. ವೆಚ್ಚವಾಗುವುದನ್ನು ಲೆಕ್ಕಾಚಾರ ಮಾಡಲಾಗಿದೆ. ಈ ಹಿಂದೆ ಅಧಿಕಾರದಲ್ಲಿದ್ದ ನಮ್ಮ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಿಸಿದ ಬಹುತೇಕ ಕಾರ್ಯಕ್ರಮಗಳನ್ನು ಪೂರೈಸಿದ್ದಲ್ಲದೆ, ರೈತರ ಬೆಳೆ ಸಾಲ ಮನ್ನಾ ಸೇರಿದಂತೆ 30ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೆ ತಂದಿತ್ತು. ಹೀಗಾಗಿ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ಇಟ್ಟಿದ್ದಾರೆ. ಬಿಜೆಪಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ, ಆಡಳಿತ ಪಕ್ಷದ ಹಾಲಿ ಶಾಸಕನ (ಚನ್ನಗಿರಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ) ಪುತ್ರನ ಮನೆಯಲ್ಲಿ ಕೋಟ್ಯಂತರ ರೂಪಾಯಿ ವಶಕ್ಕೆ ಪಡೆದುಕೊಂಡಿರುವುದು ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ. ಪಕ್ಷ ಶಾಸಕರ ಮನೆಯಲ್ಲೇ ಕೋಟ್ಯಂತರ ರೂಪಾಯಿ ಹಣ ಸಿಕ್ಕರೆ, ಸಚಿವರು ಮತ್ತು ಮುಖ್ಯಮಂತ್ರಿಗಳ ಮನೆಯಲ್ಲಿ ಎಷ್ಟು ಹಣ ಇರಬಹುದು ಎಂದು ಪ್ರಶ್ನಿಸಿದರು.
ಬಿಜೆಪಿ ಶಾಸಕನ ಭ್ರಷ್ಟಾಚಾರ ಪ್ರಕರಣದಲ್ಲಿ ವಿರೂಪಾಕ್ಷಪ್ಪ ಅವರನ್ನು ಸರಕಾರ ಕೂಡಲೇ ಬಂಧಿಸದೆ ರಕ್ಷಣೆಗೆ ಯತ್ನಿಸುತ್ತಿದೆ. ಶಾಸಕ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರೆ, ಅವರು ಮನೆಯಲ್ಲಿಯೇ ಇದ್ದಾರೆ ಎಂದು ದಾಖಲೆಯಲ್ಲಿ ಒಪ್ಪಿಕೊಂಡಿದ್ದಾರೆ. ಬೊಮ್ಮಾಯಿ ಅವರು ತಮ್ಮ ಶಾಸಕರನ್ನು ರಕ್ಷಿಸುತ್ತಿದ್ದಾರೆ ಮತ್ತು ಪ್ರಧಾನಿ ಮೋದಿ ಅವರು ಭ್ರಷ್ಟ ಸರ್ಕಾರವನ್ನು ಪರೋಕ್ಷವಾಗಿ ರಕ್ಷಣೆ ಮಾಡುವ ಪ್ರಯತ್ನ ಮಾಡುತ್ತಿದ್ದಾರೆಂದು ಆರೋಪಿಸಿದರು.
ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯಕ್ಕೆ ಆಗಾಗ್ಗೆ ಭೇಟಿ ನೀಡುತ್ತಿರುವ ಕುರಿತು ಮಾತನಾಡಿ, “ಇಡೀ ರಾಜ್ಯವು ಧಾರಾಕಾರ ಮಳೆಯಿಂದಾಗಿ ಜಲಾವೃತವಗೊಂಡಿತ್ತು. ಸಾಕಷ್ಟು ಜನರು ನಿರಾಶ್ರಿತರಾಗಿದ್ದರು. ಕೋವಿಡ್ ಸಮಯದಲ್ಲಿ ರಾಜ್ಯವು ಆಮ್ಲಜನಕದ ಕೊರತೆಯನ್ನು ಎದುರಿಸುತ್ತಿತ್ತು. ಈ ನಾಯಕರು ಆಗ ರಾಜ್ಯದ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಈಗ ಚುನಾವಣೆ ಸಮೀಪಿಸುತ್ತಿದ್ದಂತೆ ರಣಕಹಳೆ ಮೊಳಗಿಸುತ್ತಿದ್ದಾರೆಂದು ಕಿಡಿಕಾರಿದರು.
ಇದೇ ವೇಳೆ ತಮ್ಮ ಸರ್ಕಾರ ಆರಂಭಿಸಿದ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲು ಸರ್ಕಾರ ಸಂಚು ರೂಪಿಸುತ್ತಿದೆ ಎಂದು ಆರೋಪಿಸಿದರು.
ಈಗಾಗಲೇ 400 ಕ್ಯಾಂಟೀನ್ ಗಳು ಕಾರ್ಯನಿರ್ವಹಿಸುತ್ತಿಲ್ಲ. ಸರ್ಕಾರ ಬಡವರ ವಿರೋಧಿಯಾಗಿದೆ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರನ್ನಿಟ್ಟಿರುವುದಕ್ಕೇ ಕ್ಯಾಂಟೀನ್‌ಗಳನ್ನು ಮುಚ್ಚಲು ಬಿಜೆಪಿ ಸರ್ಕಾರ ಮುಂದಾಗಿದ್ದೇ ಆದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.