ರಾಜಕೀಯ

ರಾಮರಾಜ್ಯ ತರುವುದಾಗಿ ಮೋದಿಯವರು ಹೇಳಿ ರಾವಣರಾಜ್ಯ ತಂದರು, ಸ್ವರ್ಗ ತೋರಿಸುವುದಾಗಿ ನರಕ ತೋರಿಸಿದರು!

Sumana Upadhyaya

ಬೆಳಗಾವಿ: ದಿನದಿಂದ ದಿನಕ್ಕೆ ಚುನಾವಣಾ ಕಣ ರಂಗೇರುತ್ತಿದೆ. ಕಿತ್ತೂರು ಕರ್ನಾಟಕದ ಬೆಳಗಾವಿಯಿಂದ ರಾಹುಲ್ ಗಾಂಧಿ‌ ಚುನಾವಣಾ ರಣಕಹಳೆ ಮೊಳಗಿಸಿದ್ದು, ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. 

ನಗರದ ಸಿಪಿಎಡ್ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಯುವ ಕ್ರಾಂತಿ ಸಮಾವೇಶ ನಡೆಯುತ್ತಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ‌.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಲೀಂ ಅಹ್ಮದ್ ಸೇರಿ ಹಲವರು ಭಾಗಿಯಾಗಿದ್ದಾರೆ. 

ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯಲಿರುವ ಯುವಕ್ರಾಂತಿ ಸಮಾವೇಶ ಭಾರತ್ ಜೋಡೋ ಯಾತ್ರೆ ಬಳಿಕ ಮೊದಲ ಸಮಾವೇಶವಾಗಿದ್ದು, ಬೆಳಗಾವಿ ನಗರದ ಸಿಪಿಎಡ್ ಮೈದಾನದಲ್ಲಿ ಬೃಹತ್ ಪೆಂಡಾಲ್ ಹಾಕಿ 50 ಸಾವಿರಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದೆ.‌ ಕಿತ್ತೂರು ಕರ್ನಾಟಕ ಭಾಗದ 10 ಸಂಘಟನಾತ್ಮಕ ಜಿಲ್ಲೆಗಳ ಯುವ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬೆಳಗಾವಿ ನಗರ, ಬೆಳಗಾವಿ ಗ್ರಾಮೀಣ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ಧಾರವಾಡ ಗ್ರಾಮೀಣ, ಹುಬ್ಬಳ್ಳಿ ನಗರ, ಗದಗ, ಹಾವೇರಿ, ಉತ್ತರ ಕನ್ನಡ ಸಂಘಟನಾತ್ಮಕ ಜಿಲ್ಲೆಗಳ ಕಾರ್ಯಕರ್ತರ ಉದ್ದೇಶಿಸಿ ರಾಹುಲ್ ಗಾಂಧಿ ಭಾಷಣ ಮಾಡುತ್ತಾರೆ. 

ಮಧ್ಯಾಹ್ನ 12.30ಕ್ಕೆ ಬೆಳಗಾವಿಯ ಸಾಂಬ್ರಾ ಏರ್‌ಪೋರ್ಟ್‌ಗೆ ಆಗಮಿಸಿದ ರಾಹುಲ್ ಗಾಂಧಿ ಅವರನ್ನು ರಾಜ್ಯದ ಕಾಂಗ್ರೆಸ್ ನಾಯಕರು ಬರಮಾಡಿಕೊಂಡರು.

ರಾಹುಲ್ ಗಾಂಧಿ ಆಗಮ‌ನದಿಂದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರ ಕರೆತರಲು ನಾಯಕರು, ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಹೊಸ ಕೆಲಸ ನೀಡಿದ್ದಾರೆ. ಬೆಳಗಾವಿ ನಗರದಾದ್ಯಂತ ಕಾಂಗ್ರೆಸ್ ನಾಯಕರ ಕಟೌಟ್‌ಗಳು, ಬ್ಯಾನರ್‌, ‌ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿವೆ. 

ಸಮಾವೇಶದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಲೀಂ ಅಹ್ಮದ್, ರಾಮರಾಜ್ಯ ಮಾಡುವುದಾಗಿ ಭರವಸೆ ನೀಡಿದ ಪ್ರಧಾನಿ ಮೋದಿಯವರು ರಾವಣರಾಜ್ಯ ತಂದರು. ಸ್ವರ್ಗ ಮಾಡುವುದಾಗಿ ಚುನಾವಣೆಯಲ್ಲಿ ಸುಳ್ಳು ಭರವಸೆಗಳನ್ನು ನೀಡಿ ನರಕ ತೋರಿಸಿದ್ದಾರೆ, ಸಮಾಜವನ್ನು ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಟೀಕಿಸಿದರು. 

SCROLL FOR NEXT