ರಾಜಕೀಯ

ಬಂಧನಕ್ಕೆ ಹೆದರುವ ಮಕ್ಕಳು ನಾವಲ್ಲ: ಮೀಸಲಾತಿ ಮೆರವಣಿಗೆಯಲ್ಲಿ ಬಿಜೆಪಿ ವಿರುದ್ಧ ಡಿಕೆಶಿ ಗುಡುಗು

Nagaraja AB

ಬೆಂಗಳೂರು: ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ಮಾಡಿ ಆದೇಶ ಮಾಡಿದರೂ ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ‌ ಶಿಫಾರಸ್ಸು ಮಾಡಿಲ್ಲ ಎಂದು‌ ಆರೋಪಿಸಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಇಂದು ಕೆಪಿಸಿಸಿ ಕಚೇರಿಯಿಂದ ರಾಜ ಭವನದವರೆಗೂ ಪ್ರತಿಭಟನಾ ಮೆರವಣಿಗೆ ಆಯೋಜಿಸಿತ್ತು. ಆದರೆ ಮಾರ್ಗ ಮಧ್ಯದಲ್ಲಿಯೇ ಕಾಂಗ್ರೆಸ್ ಮುಖಂಡರನ್ನು ಬಂಧಿಸಿ ಬಸ್ ನಲ್ಲಿ ಕರೆದೊಯ್ಯಲಾಯಿತು.

ವಶಕ್ಕೆ ಪಡೆಯುವುದಕ್ಕೆ ಮುನ್ನ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಬಂಧನಕ್ಕೆ ಹೆದರುವ ಮಕ್ಕಳು ನಾವಲ್ಲ, ಹೋರಾಟದ ಕಿಚ್ಚು ಕಾಂಗ್ರೆಸ್‌ ಕುಟುಂಬದ ರಕ್ತದಲ್ಲಿ ಹರಿಯುತ್ತಿದೆ. ದಲಿತರಿಗೆ ನ್ಯಾಯ ಸಿಗುವವರೆಗೆ ನಮ್ಮ ಹೋರಾಟದ ಕೂಗು ನಿಲ್ಲದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಬಿಜೆಪಿ  ಸರ್ಕಾರ ಎಸ್‌ಸಿ, ಎಸ್‌ಟಿ ಸಮುದಾಯಕ್ಕೆ ಮೋಸ ಮಾಡಿದೆ. ಇಲ್ಲಿಯವರೆಗೆ ಸುಮ್ಮನಿದ್ದ ಅವರು ನಾವು ಪ್ರತಿಭಟನೆಗೆ ಮುಂದಾದ ಬಳಿ ಇವತ್ತು ಕಳುಹಿಸಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ನಾವು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ಕೈಗೆತ್ತಿಕೊಂಡ ನಂತರ ಪರಿಶಿಷ್ಠರ ಮೀಸಲಾತಿ ಹೆಚ್ಚಳ ವಿಚಾರದಲ್ಲಿ ತರಾತುರಿಯಲ್ಲಿ ಕಣ್ಣೊರೆಸುವ ತಂತ್ರಕ್ಕೆ ಮೊರೆ ಹೋಗಿದೆ. ಇದು ಬಿಜೆಪಿ ಕರ್ನಾಟಕದ ಕಿವಿ ಮೇಲೆ ಹೂ ಇಡುವ ಕೆಲಸ ಎಂಬುದು ಸ್ಪಷ್ಟ. ಇಲ್ಲಿಯವರೆಗೆ ಸುಮ್ಮನಿದ್ದು, ಈಗ ಪ್ರಸ್ತಾವನೆ ಸಲ್ಲಿಸುವುದು ಮೂಗಿಗೆ ತುಪ್ಪ ಸವರಲು ಮಾತ್ರ ಎಂದು ಅವರು ಟೀಕಿಸಿದರು. 

ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ, ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

SCROLL FOR NEXT