ರಾಜಕೀಯ

ಮಹಿಳಾ ಪ್ರಾತಿನಿಧ್ಯ ಎಂಬ ಕನ್ನಡಿಯೊಳಗಿನ ಗಂಟು: 75 ವರ್ಷಗಳಲ್ಲಿ 'ಬಳ್ಳಾರಿ' ವಿಧಾನಸಭೆ ಕ್ಷೇತ್ರದಿಂದ ಆಯ್ಕೆಯಾಗಿರುವುದು ಏಕಮಾತ್ರ ಮಹಿಳೆ!

Shilpa D

ಬಳ್ಳಾರಿ: ರಾಜಕೀಯದಲ್ಲಿ ಮಹಿಳಾ ಪ್ರಾತಿನಿಧ್ಯ, ಶಾಸನಸಭೆ­ಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಎಂಬ ಕನ್ನಡಿಯೊಳಗಿನ ಗಂಟು ಪ್ರತೀ ಚುನಾವಣೆ ಸಂದರ್ಭದಲ್ಲೂ ಮುನ್ನೆಲೆಗೆ ಬರುತ್ತದೆ. ರಾಜ್ಯ ರಾಜಕೀಯದಲ್ಲಿ ಗಣಿ ನಾಡು ಬಳ್ಳಾರಿ ಸದಾ ಯಾವುದಾದರೊಂದು ವಿಷಯಕ್ಕೆ ಸುದ್ದಿಯಲ್ಲಿರುತ್ತದೆ.

ಜನಾಕರ್ಷಣೆಯ ನಡುವೆಯೂ ಬಳ್ಳಾರಿ ಜಿಲ್ಲೆಯ ಇತಿಹಾಸದಲ್ಲಿ ಇದುವರೆಗೂ ಕೇವಲ ಒಬ್ಬರು ಮಹಿಳೆ ಮಾತ್ರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. 1957ರಲ್ಲಿ ಅಲ್ಲಂ ಸುಮಗಲಮ್ಮ ಬಳ್ಳಾರಿ ಜಿಲ್ಲೆಯ ಕುರುಗೋಡು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದರು. ರಾಜ್ಯದಲ್ಲಿ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳಾ ಶಾಸಕಿಯೂ ಆಗಿದ್ದರು. ಅಂದಿನಿಂದ ರಾಜ್ಯ ವಿಧಾನಸಭೆಯಲ್ಲಿ ಜಿಲ್ಲೆಯಿಂದ ಮಹಿಳೆಯರಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ.

ಅನೇಕ ಮಹಿಳೆಯರು ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ವತಂತ್ರ ಪಕ್ಷಗಳಿಂದ ಚುನಾವಣೆಗೆ ಸ್ಪರ್ಧಿಸಿದ್ದಾರೆ, ಆದರೆ ಆಯ್ಕೆಯಾಗಲಿಲ್ಲ. ಈ ವರ್ಷ ಜಿಲ್ಲೆಯ ಮಹಿಳಾ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಇತ್ತೀಚೆಗಷ್ಟೇ ತನ್ನ ಅಭ್ಯರ್ಥಿ ಪಟ್ಟಿಯನ್ನು ಪ್ರಕಟಿಸಿದ ಕಾಂಗ್ರೆಸ್ ಬಳ್ಳಾರಿಯ ಹಾಲಿ ಶಾಸಕರಿಗೆ ಟಿಕೆಟ್ ನೀಡಿದೆ.

ಬಳ್ಳಾರಿ ನಗರದಿಂದ ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳಲ್ಲಿ ನಾನೂ  ಇದ್ದೇನೆ, ನನ್ನನ್ನು ಅಭ್ಯರ್ಥಿಯನ್ನು ಪರಿಗಣಿಸುವಂತೆ ಪಕ್ಷದ ಹೈಕಮಾಂಡ್‌ಗೆ ಮನವಿ ಮಾಡಿದ್ದೆ, ಕಳೆದ 75 ವರ್ಷಗಳಲ್ಲಿಬಳ್ಳಾರಿಯಿಂದ ಒಬ್ಬರೇ ಮಹಿಳಾ ಶಾಸಕಿ ಇದ್ದದ್ದು ಇತಿಹಾಸ.  ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳು ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎಂದು ಟಿಕೆಟ್ ಆಕಾಂಕ್ಷಿ ಮಹಿಳೆಯೊಬ್ಬರು ತಿಳಿಸಿದ್ದಾರೆ.

1999 ರ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಮಾಜಿ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಸೋಲಿಸುವ ಮೂಲಕ ಬಳ್ಳಾರಿ ಜಿಲ್ಲೆಯಿಂದ ಸಂಸತ್ತಿಗೆ ಆಯ್ಕೆಯಾದರು. 2009ರಲ್ಲಿ ಬಿಜೆಪಿಯ ಜೆ ಶಾಂತಾ 15ನೇ ಲೋಕಸಭೆಯಲ್ಲಿ ಬಳ್ಳಾರಿಯಿಂದ ಸಂಸದರಾದರು.

SCROLL FOR NEXT