ರಾಜಕೀಯ

ವಿಧಾನಸಭೆ ಚುನಾವಣೆ: ಮಸೀದಿಗಳು ಆಯ್ತು, ಇದೀಗ ಮತದಾರರನ್ನು ಓಲೈಸಲು ಚರ್ಚ್‌ಗಳತ್ತ ಮುಖ ಮಾಡಿದ ಅಭ್ಯರ್ಥಿಗಳು

Ramyashree GN

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದ್ದು, ಅಭ್ಯರ್ಥಿಗಳು ಮತದಾರರ ಓಲೈಕೆಗೆ ವಿವಿಧ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಶುಕ್ರವಾರ ಮಸೀದಿಗಳಿಗೆ ಭೇಟಿ ನೀಡಿದ್ದ ನಂತರ, ಮತದಾರರನ್ನು ಸೆಳೆಯಲು ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳ ಚರ್ಚ್‌ಗಳ ಮುಂದೆ ಸಾಲುಗಟ್ಟಿ ನಿಲ್ಲುತ್ತಿದ್ದಾರೆ.

ಜಯನಗರ ಬಿಜೆಪಿ ಅಭ್ಯರ್ಥಿ ಸಿಕೆ ರಾಮಮೂರ್ತಿ ಅವರು ತಮ್ಮ ಕ್ಷೇತ್ರದ ಚರ್ಚ್‌ನಲ್ಲಿ ಕ್ರೈಸ್ತ ಮತದಾರರನ್ನು ಭೇಟಿ ಮಾಡಿ ಮತದಾನದ ದಿನವಾದ ಮೇ 10 ರಂದು ತಮ್ಮ ಮತಗಳನ್ನು ನೀಡಿ ಬೆಂಬಲಿಸುವಂತೆ ಮನವಿ ಮಾಡಿದರು.

ಅದೇ ರೀತಿ, ಸಿವಿ ರಾಮನ್ ನಗರದ ಕಾಂಗ್ರೆಸ್ ಅಭ್ಯರ್ಥಿ ಆನಂದ್ ಕುಮಾರ್ ಎಸ್, ಓಲ್ಡ್ ಮದ್ರಾಸ್‌ನ ನ್ಯೂ ಬೈಯಪ್ಪನಹಳ್ಳಿಯಲ್ಲಿ ಪ್ರಚಾರ ನಡೆಸುತ್ತಿದ್ದಾಗ, ಕ್ರಿಶ್ಚಿಯನ್ ತಮಿಳು ಸಮುದಾಯದ ಜನರನ್ನು ಭೇಟಿ ಮಾಡಿ, ಅವರ ಬೆಂಬಲವನ್ನು ಕೋರಿದರು.

ಸರ್ವಜ್ಞನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರು ತಮ್ಮ ಪತ್ನಿಯೊಂದಿಗೆ ಭಾನುವಾರದ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಪಾದ್ರಿಗಳ ಆಶೀರ್ವಾದ ಪಡೆದರು. ತಮ್ಮ ಸಮುದಾಯದವರು ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದರು.

ಗೋವಿಂದರಾಜನಗರ ಅಭ್ಯರ್ಥಿ ಪ್ರಿಯಾ ಕೃಷ್ಣ ಅವರು ಕ್ಷೇತ್ರದ ಚರ್ಚ್‌ನಲ್ಲಿ ಕ್ರೈಸ್ತ ಸಮುದಾಯದವರನ್ನು ಭೇಟಿ ಮಾಡಿದರು. ಜನರೊಂದಿಗೆ ಸಂವಾದ ನಡೆಸಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದ ನಂತರ ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಹೇಳಿದರು.

ಕ್ರೈಸ್ತ ಸಮುದಾಯದೊಂದಿಗೆ ಉತ್ತಮ ಸಂಬಂಧ ಹೊಂದಿರುವ ಶಾಂತಿನಗರದ ಶಾಸಕ ಎಂಎ ಹ್ಯಾರಿಸ್ ಅವರು ತಮ್ಮ ವಿಧಾನಸಭಾ ಕ್ಷೇತ್ರದ ಸೇಂಟ್ ಪ್ಯಾಟ್ರಿಕ್ ಚರ್ಚ್, ಸೇಕ್ರೆಡ್ ಹಾರ್ಟ್ ಚರ್ಚ್, ಆಲ್ ಸೇಂಟ್ಸ್ ಚರ್ಚ್ ಮತ್ತು ಇನ್ಫೆಂಟ್ ಜೀಸಸ್ ಚರ್ಚ್ ಸದಸ್ಯರನ್ನು ಭೇಟಿ ಮಾಡಿದರು. ಗುರುವಾರ ಸಾಯಿಬಾಬಾ ಮಂದಿರದಲ್ಲಿ ಹಿಂದೂ ಸಮುದಾಯದ ಜನರನ್ನು ಭೇಟಿಯಾಗಿದ್ದೇನೆ ಎಂದು ಅವರು ಹೇಳಿದರು.

SCROLL FOR NEXT