ರಾಜಕೀಯ

ಮತದಾರ ದೇವರುಗಳು ನನಗೆ ವೋಟ್​ ಹಾಕದಿದ್ರೆ, ನಾನು ನನ್ನ ಹೆಂಡ್ತಿ ವಿಷ ಕುಡಿದು ಸಾಯುತ್ತೀವಿ: ಬಾಬುರಾವ್ ಚಿಂಚನಸೂರ

Sumana Upadhyaya

ಕಲಬುರಗಿ: ಚುನಾವಣೆಯಲ್ಲಿ ಅಭ್ಯರ್ಥಿಗಳು ಕೆಲವೊಮ್ಮೆ ಮತದಾರರ ಮನಗೆಲ್ಲಲು ವಿಚಿತ್ರ ಬೇಡಿಕೆಗಳು, ಆಮಿಷಗಳನ್ನು ಒಡ್ಡುತ್ತಾರೆ. ಯಾದಗಿರಿ ಜಿಲ್ಲೆಯ ಗುರುಮಠಕಲ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಅವರು ಇತ್ತೀಚೆಗೆ ಅಪಘಾತದಲ್ಲಿ ಗಾಯಗೊಂಡು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಪತ್ನಿ ಪತಿ ಪರವಾಗಿ ಪ್ರಚಾರ ನಡೆಸುತ್ತಿದ್ದಾರೆ.

ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಬಾಬುರಾವ್ ಚಿಂಚನಸೂರ್, ಮತದಾರ ಪ್ರಭುಗಳೇ ನೀವು ನನಗೆ ವೋಟ್​ ಹಾಕದಿದ್ದರೆ, ನಾನು, ನನ್ನ ಹೆಂಡತಿ ವಿಷ ಕುಡಿಯುತ್ತೇವೆ ಎಂದು ಹೇಳಿ ಕಣ್ಣೀರಿಟ್ಟಿದ್ದಾರೆ. 

ಬಾಬುರಾವ್ ಅವರು ಅಪಘಾತದಲ್ಲಿ ಗಾಯಗೊಂಡು ಚೇತರಿಸಿಕೊಳ್ಳುತ್ತಿರುವುದರಿಂದ ಅವರ ಪತ್ನಿ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾನು ಶೇಕಡಾ 50ರಷ್ಟು ಚೇತರಿಸಿಕೊಂಡಿದ್ದೇನೆ, ಇನ್ನು 6 ವಾರಗಳ ಕಾಲ ವಿಶ್ರಾಂತಿ ತೆಗೆದುಕೊಳ್ಳಬೇಕು. ನೀವು ವೀಲ್‌ ಚೇರ್‌ ಮೇಲೂ ಕೂಡ ಹೋಗುವಂತಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಆದ್ದರಿಂದ ಕ್ಷೇತ್ರದಲ್ಲಿ ನನ್ನ ಪತ್ನಿ ಪ್ರಚಾರ ಮಾಡುತ್ತಿದ್ದಾರೆ.

ಒಂದು ವೇಳೆ ಮತದಾರ ದೇವರುಗಳು ಆಶೀರ್ವಾದ ಮಾಡಲಿಲ್ಲ ಅಂದರೆ ನಾನು ಮತ್ತು ನನ್ನ ಹೆಂಡತಿ ವಿಷ ಕುಡಿದು ಸಾಯುತ್ತೇವೆ ಎಂದು ಹೇಳುವ ಮೂಲಕ ಕಣ್ಣೀರಿಟ್ಟಿದ್ದಾರೆ.

ಗುರುಮಠಕಲ್ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಜಯ ಗಳಿಸಿದ್ದರು. 2008, 2013ರಲ್ಲಿ ಸತತ ಎರಡು ಬಾರಿ ಜಯ ಸಾಧಿಸಿದ್ದ ಬಾಬುರಾವ್ 2018ರಲ್ಲಿ ಜೆಡಿಎಸ್‌ ಅಭ್ಯರ್ಥಿ ವಿರುದ್ಧ ಸೋಲು ಕಂಡರು.

SCROLL FOR NEXT