ರಾಜಕೀಯ

ಮಲ್ಲಿಕಾರ್ಜುನ ಖರ್ಗೆ ಸಾವು ಬಯಸಿದ ಬಿಜೆಪಿ ಶಾಸಕ: ಪ್ರಧಾನಿ ಮೋದಿ ಕ್ಷಮೆಗೆ ಸುರ್ಜೇವಾಲಾ ಆಗ್ರಹ

Manjula VN

ಬೆಂಗಳೂರು: ‘ರಾಜಸ್ಥಾನದ ಬಿಜೆಪಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಶಾಸಕ ಮದನ್ ದಿಲಾವರ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಾವು ಬಯಸಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕ್ಷಮೆ ಕೇಳಬೇಕು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಬುಧವಾರ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮದನ್ ದಿಲಾವರ್ ಅವರ ಹೇಳಿಕೆ ಪ್ರಕಾರ, ಖರ್ಗೆ ಅವರಿಗೆ 80 ವರ್ಷವಾಗಿದ್ದು, ದೇವರು ಆತನನ್ನು ಯಾವಾಗಬೇಕಾದರೂ ಕರೆಸಿಕೊಳ್ಳಬಹುದು’ ಎಂದಿದ್ದಾರೆ. ಆ ಮೂಲಕ, ದಲಿತ ಸಮುದಾಯದ ಶ್ರೇಷ್ಠ ನಾಯಕನ ವಿರುದ್ಧ ಬಿಜೆಪಿಯ ದ್ವೇಷ ಮನೋಭಾವ ಎದ್ದು ಕಾಣುತ್ತಿದೆ.

ಕಾರ್ಮಿಕ ಕುಟುಂಬದಲ್ಲಿ ಜನಿಸಿದ ಮಲ್ಲಿಕಾರ್ಜುನ ಖರ್ಗೆ ಅವರು ಬ್ಲಾಕ್ ಅಧ್ಯಕ್ಷ ಸ್ಥಾನದಿಂದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನದವರೆಗೂ ಏರಿದ್ದಾರೆ. ಅಂತಹವರ ವಿರುದ್ಧ ಇಂತಹ ಕೀಳು ಮಾತುಗಳನ್ನಾಡುವುದನ್ನು ಸಹಿಸಲು ಸಾಧ್ಯವಿಲ್ಲ.

ರಾಜ್ಯದ ಜನರು ಪಕ್ಷಾತೀತವಾಗಿ ಖರ್ಗೆ ಅವರನ್ನು ಸೋಲಿಲ್ಲದ ಸರದಾರನೆಂದು ಕರೆಯುತ್ತಾರೆ. ಇಂತಹವರ ಸಾವನ್ನು ಬಿಜೆಪಿ ಬಯಸುತ್ತಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ, ನೀವು ಖರ್ಗೆ ಅವರನ್ನು ದ್ವೇಷಿಸುವ ಕಾರಣಕ್ಕೆ ಬಿಜೆಪಿ ಇಂತಹ ಕೀಳು ರಾಜಕೀಯಕ್ಕೆ ಇಳಿಯುತ್ತದೆಯೇ? ನಿಮ್ಮನ್ನು ಮೆಚ್ಚಿಸಲು ಬಿಜೆಪಿ ನಾಯಕರು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಮಂಡ್ಯದಲ್ಲಿ ನಡೆದ ಬಿಜೆಪಿ ಪ್ರಚಾರ ಸಭೆಯಲ್ಲಿ ಅಶ್ವತ್ಥ್ ನಾರಾಯಣ್ ಅವರು ಸಿದ್ದರಾಮಯ್ಯ ವಿರುದ್ಧ ನೀಡಿದ್ದ ಹೇಳಿಕೆಯನ್ನು ಸುರ್ಜೇವಾಲಾ ಅವರು ಪ್ರಸ್ತಾಪಿಸಿದರು.

ಬಿಜೆಪಿ ಸಚಿವರೊಬ್ಬರು ಸಿದ್ದರಾಮಯ್ಯ ಅವರ ಹತ್ಯೆಗೆ ಕರೆ ನೀಡಿದ್ದರು. ಅದು ನಿಮಗೆ ನೆನಪಿಲ್ಲವೇ? ಇದನ್ನು ವಿಧಾನಸಭೆಯಲ್ಲಿಯೇ ಅವರು ಒಪ್ಪಿಕೊಂಡಿದ್ದು ನಿಮಗೆ ನೆನಪಿಲ್ಲವೇ? ಖರ್ಗೆಯವರ ಸಾವನ್ನು ಬಿಜೆಪಿ ನಾಯಕರು ಬಯಸುತ್ತಿದ್ದು, ಈ ಬಗ್ಗೆ ನೀವು ಮೌನವಾಗಿರುವುದೇಕೆ? ನಿಮ್ಮನ್ನು ಮೆಚ್ಚಿಸಲು ಬಿಜೆಪಿಯವರು ಖರ್ಗೆಯವರ ಹೆಸರನ್ನು ಬಳಸುತ್ತಿದ್ದಾರೆಯೇ? ಎಂದು ಸರಣಿ ಪ್ರಶ್ನೆಗಳನ್ನು ಕೇಳಿದ್ದಾರೆ.

SCROLL FOR NEXT