ರಾಜಕೀಯ

ಬಿಜೆಪಿಗೆ ಮತ ಹಾಕಿ ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ಶಕ್ತಿಯ ದೇಶವನ್ನಾಗಿ ಪರಿವರ್ತಿಸಿ: ಪ್ರಧಾನಿ ಮೋದಿ

Sumana Upadhyaya

ಮಂಗಳೂರು, ಬೈಲಹೊಂಗಲ (ಬೆಳಗಾವಿ ಜಿಲ್ಲೆ): ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕ ದೇಶವನ್ನಾಗಿ ಮಾಡುವುದು ನನ್ನ ಕನಸು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಈ ಕನಸನ್ನು ನನಸಾಗಿಸಲು ಮೇ 10 ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಜನತೆಗೆ ಮನವಿ ಮಾಡಿದ್ದಾರೆ. 

ಮಂಗಳೂರು ಸಮೀಪದ ಮೂಡಬಿದರೆಯ ಮುಲ್ಕಿಯಲ್ಲಿ ನಿನ್ನೆ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ತಮ್ಮ ಸರ್ಕಾರ ಹಾಕಿಕೊಟ್ಟ ದೃಢವಾದ ಮಾರ್ಗಸೂಚಿಯಿಂದಾಗಿ ದೇಶ ಇಂದು ವಿಶ್ವದ ಐದನೇ ಅತಿದೊಡ್ಡ ಆರ್ಥಿಕ ದೇಶವಾಗಿದೆ. ಕೈಗಾರಿಕೆ ಅಭಿವೃದ್ಧಿ, ಕೃಷಿ, ಮೀನುಗಾರಿಕೆ, ಆರೋಗ್ಯ, ಶಿಕ್ಷಣ ಮತ್ತು ಇತರ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಪ್ರಥಮ ಸ್ಥಾನಕ್ಕೆ ತರಲು ಭಾರತೀಯ ಜನತಾ ಪಕ್ಷ ಸಂಕಲ್ಪ ಮಾಡಿದ್ದರೆ, ದೆಹಲಿಯ ಒಂದು ಕುಟುಂಬಕ್ಕೆ ಎಟಿಎಂ ಮಾಡಲು ಕಾಂಗ್ರೆಸ್ ಬಯಸಿದೆ ಎಂದು ಹೇಳಿದರು. 

ಮತದಾರರು ತಮ್ಮ ಮತ್ತು ರಾಜ್ಯದ ಭವಿಷ್ಯದ ಬಗ್ಗೆ ಕಾಳಜಿ ವಹಿಸಿದ್ದರೆ ಬಿಜೆಪಿಯನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು. ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ಕರ್ನಾಟಕ ಜನತೆಗೆ ಕನಸಿನ ವೃತ್ತಿಜೀವನ ಸಾಧ್ಯವಿಲ್ಲ. ಅದಕ್ಕಾಗಿ ಸ್ಥಿರ ಸರ್ಕಾರದ ಅವಶ್ಯಕತೆ ಇದೆ ಎಂದರು.

ಭಯೋತ್ಪಾದನೆಯನ್ನು ಉತ್ತೇಜಿಸುವ ಕಾಂಗ್ರೆಸ್ ಶಾಂತಿ ಮತ್ತು ಅಭಿವೃದ್ಧಿಯ ಶತ್ರುವಾಗಿದೆ ಎಂದು ಆರೋಪಿಸಿದರು. 50ಕ್ಕೂ ಹೆಚ್ಚು ಜನರನ್ನು ಕೊಂದ ರಾಜಸ್ಥಾನದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದ ಆರೋಪಿಗಳನ್ನು ಆ ರಾಜ್ಯದ ಕಾಂಗ್ರೆಸ್ ಸರ್ಕಾರ ಖುಲಾಸೆಗೊಳಿಸಿತು ಎಂದು ಆರೋಪಿಸಿದರು. 

ನಂತರ ನಿನ್ನೆ ಸಾಯಂಕಾಲ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನಲ್ಲಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಶಾರ್ಟ್‌ಕಟ್ ಆಡಳಿತವನ್ನು ನೋಡುತ್ತಿದ್ದು, ಈ ಬಗ್ಗೆ ಜನರು ಜಾಗರೂಕರಾಗಿರಬೇಕು ಎಂದು ಹೇಳಿದರು. ಎರಡೂ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ರಾಜಕೀಯವನ್ನು ಆಶ್ರಯಿಸುತ್ತವೆ. ಜಾತಿ, ಮತ ಮತ್ತು ಧರ್ಮದ ಆಧಾರದ ಮೇಲೆ ಸಮುದಾಯಗಳನ್ನು ವಿಭಜಿಸುವ ಗುರಿಯನ್ನು ಹೊಂದಿವೆ. ಆದರೆ ಈ 21 ನೇ ಶತಮಾನದಲ್ಲಿ ಜನರು ಶಾರ್ಟ್‌ಕಟ್ ಸರ್ಕಾರಗಳಿಗೆ ಅಧಿಕಾರ ನೀಡುವುದಿಲ್ಲ, ಬದಲಿಗೆ ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ನನಗಿದೆ ಎಂದರು. 

ಈ ಬಾರಿ ಬಿಜೆಪಿಯನ್ನು ಸಂಪೂರ್ಣ ಬಹುಮತದೊಂದಿಗೆ ಆಯ್ಕೆ ಮಾಡಲು ರಾಜ್ಯದ ಜನರು ನಿರ್ಧರಿಸಿದ್ದು, ಪಕ್ಷವು ಎಲ್ಲಾ ವರ್ಗ ಮತ್ತು ಸಮುದಾಯಗಳ ವಿಶ್ವಾಸವನ್ನು ಗಳಿಸಿದೆ. ನಾವು ಇಡೀ ಜಿಲ್ಲೆಯ ಸಮತೋಲಿತ ಅಭಿವೃದ್ಧಿಗಾಗಿ ‘ಆಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮ’ವನ್ನು ಪ್ರಾರಂಭಿಸಿದ್ದೇವೆ. ಈಗ ಮಹತ್ವಾಕಾಂಕ್ಷೆಯ ಬ್ಲಾಕ್ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಕೆಲಸ ಮಾಡುತ್ತಿದ್ದೇವೆ. ಡಬಲ್ ಇಂಜಿನ್ ಸರ್ಕಾರದ ಯಶಸ್ಸಿಗೆ ಕರ್ನಾಟಕದ ಅಭಿವೃದ್ಧಿಯೇ ಸೂತ್ರ ಎಂದರು.

ಕಾಂಗ್ರೆಸ್ ಮತ್ತು ಇತರ ಪಕ್ಷಗಳು ರಾಜ್ಯದ ಚಿತ್ರಣವನ್ನು ಬದಲಾಯಿಸುವ ಷಡ್ಯಂತ್ರದಲ್ಲಿ ತೊಡಗಿವೆ. ಜನರು ಜಾಗರೂಕರಾಗಿರಬೇಕು. ಬಿಜೆಪಿ ಸರ್ಕಾರ ಮತ್ತು ಮೋದಿ ಅವರು ಜನರ ಸೇವಕರಾಗಿ ಕೆಲಸ ಮಾಡಲು ಬಯಸುತ್ತಾರೆ, ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ದೆಹಲಿಯ ರಾಜಮನೆತನದ ಸೇವಕರಾಗಿದ್ದರೆ, ಜೆಡಿಎಸ್ ಒಂದು ಕುಟುಂಬದ ಖಾಸಗಿ ಲಿಮಿಟೆಡ್ ಕಂಪನಿಯಾಗಿದೆ ಎಂದು ಕೂಡ ಪ್ರಧಾನಿ ಮೋದಿ ಆರೋಪಿಸಿದ್ದಾರೆ.

SCROLL FOR NEXT