ರಾಜಕೀಯ

ಎಕ್ಸಿಟ್ ಪೋಲ್ ನಂಬುವುದಿಲ್ಲ, ಕಾಂಗ್ರೆಸ್ 146ಕ್ಕೂ ಹೆಚ್ಚು ಸ್ಥಾನ ಪಡೆಯಲಿದೆ: ಡಿಕೆ ಶಿವಕುಮಾರ್

Lingaraj Badiger

ಬೆಂಗಳೂರು: ಈ ಬಾರಿಯೂ ಅತಂತ್ರ ವಿಧಾನಸಭೆಯ ಭವಿಷ್ಯ ನುಡಿದ ಎಕ್ಸಿಟ್ ಪೋಲ್ ಫಲಿತಾಂಶಗಳಲ್ಲಿ ನನಗೆ ನಂಬಿಕೆ ಇಲ್ಲ ಎಂದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ(ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಕಾಂಗ್ರೆಸ್ 146 ಸ್ಥಾನಗಳ ಗಡಿಯನ್ನು ದಾಟಲಿದೆ ಎಂದು ಹೇಳಿದ್ದಾರೆ.

ಕನಕಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಶಿವಕುಮಾರ್ ಅವರು, ಚುನಾವಣಾ ಫಲಿತಾಂಶವು ನಿರ್ಣಾಯಕವಾಗಿ ತಮ್ಮ ಪಕ್ಷದ ಪರವಾಗಿರಲಿದೆ ಮತ್ತು ಯಾವುದೇ ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಮತ್ತು ಚುನಾವಣೋತ್ತರ ಮೈತ್ರಿಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಎಎನ್‌ಐ ಜೊತೆ ಮಾತನಾಡಿದ ಡಿಕೆಶಿ, "ನನ್ನ ಮೊದಲ ಪ್ರತಿಕ್ರಿಯೆ. ಎಕ್ಸಿಟ್ ಪೋಲ್ ನ ಅಂಕಿಅಂಶಗಳನ್ನು ನಾನು ನಂಬುವುದಿಲ್ಲ. ನನ್ನ ಮೌಲ್ಯಮಾಪನದ ಪ್ರಕಾರ, ನಾವು 146 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಜನರು ತಿಳುವಳಿಕೆಯುಳ್ಳವರು ಮತ್ತು ವಿದ್ಯಾವಂತರು ಮತ್ತು ರಾಜ್ಯದ ಹಿತಾಸಕ್ತಿಗಳನ್ನು ಪರಿಗಣಿಸಿ ಮತ ಚಲಾಯಿಸಿದ್ದಾರೆ. ಕರ್ನಾಟಕದಲ್ಲಿ ಡಬಲ್ ಎಂಜಿನ್ ವಿಫಲವಾಗಿದೆ. ಅತಂತ್ರ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರಿ ಕುತೂಹಲ ಕೆರಳಿಸಿದ್ದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಬುಧವಾರ ಮತದಾನ ನಡೆದಿದ್ದು, ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಮಧ್ಯೆ ಬಹುತೇಕ ಮಂದಿ ಕಾಯುತ್ತಿದ್ದ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಅತಂತ್ರ ವಿಧಾನಸಭೆಯ ಸುಳಿವು ನೀಡಿವೆ.

SCROLL FOR NEXT