ರಾಜಕೀಯ

ಕರ್ನಾಟಕ ಸಿಎಂ ಆಯ್ಕೆ ವಿಳಂಬ ಪ್ರಶ್ನಿಸಿದ ಬಿಜೆಪಿಗೆ ಕಾಂಗ್ರೆಸ್ ತಿರುಗೇಟು

Lingaraj Badiger

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಆಯ್ಕೆ ವಿಳಂಬವನ್ನು ಟೀಕಿಸಿದ ಬಿಜೆಪಿ ವಿರುದ್ಧ ಬುಧವಾರ ತೀವ್ರ ವಾಗ್ದಾಳಿ ನಡೆಸಿದ ಕಾಂಗ್ರೆಸ್, ಚುನಾವಣೆಯಲ್ಲಿ ಗೆದ್ದ ಹಲವು ದಿನಗಳ ನಂತರ ಉತ್ತರ ಪ್ರದೇಶ ಮತ್ತು ಅಸ್ಸಾಂನಲ್ಲಿ ಬಿಜೆಪಿ ತನ್ನ ಮುಖ್ಯಮಂತ್ರಿಗಳನ್ನು ಘೋಷಿಸಿದ ಉದಾಹರಣೆಗಳನ್ನು ನೀಡಿದೆ.

2017ರಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶ ಮಾರ್ಚ್ 11 ರಂದು ಪ್ರಕಟವಾಗಿತ್ತು. ಆದರೆ 8 ದಿನಗಳ ನಂತರ ಮಾರ್ಚ್ 19 ರಂದು ಯೋಗಿ ಅವರು ಸಿಎಂ ಆಗಿ ನೇಮಕಗೊಂಡರು. 2021ರ ಅಸ್ಸಾಂ ವಿಧಾನಸಭಾ ಚುನಾವಣೆಯ ಫಲಿತಾಂಶ ಮೇ 3 ರಂದು ಪ್ರಕಟವಾಯಿತು. ಆದರೆ ಹಿಮಂತ ಬಿಸ್ವ ಶರ್ಮಾ ಅವರು 7 ದಿನಗಳ ನಂತರ ಮೇ 10 ರಂದು ಸಿಎಂ ಎಂದು ಘೋಷಿಸಲಾಯಿತು. ಇಂತಹ ಇನ್ನೂ ಅನೇಕ ಉದಾಹರಣೆಗಳಿವೆ  ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವಿಟ್ ಮೂಲಕ ತಿರುಗೇಟು ನೀಡಿದ್ದಾರೆ.

ಉನ್ನತ ಹುದ್ದೆಗಾಗಿ ತೀವ್ರ ಲಾಬಿ ನಡೆಯುತ್ತಿರುವ ನಡುವೆಯೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ನಿರ್ಧರಿಸಲು ಕಾಂಗ್ರೆಸ್ ವಿಳಂಬವಾಗಿದೆ ಎಂದು ಹಲವು ಬಿಜೆಪಿ ನಾಯಕರು ಟೀಕಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಮೇ 13 ರಂದು ಫಲಿತಾಂಶ ಪ್ರಕಟವಾಗಿದೆ. ಆದರೆ ಸ್ಪಷ್ಟ ಬಹುಮತ ಪಡೆದಿರುವ ಕಾಂಗ್ರೆಸ್ ಇನ್ನೂ ತನ್ನ ಮುಖ್ಯಮಂತ್ರಿಯನ್ನು ಅಂತಿಮಗೊಳಿಸಿಲ್ಲ ಮತ್ತು ಸಮಾಲೋಚನೆಯ ಪ್ರಕ್ರಿಯೆ ನಡೆಯುತ್ತಿದೆ.

SCROLL FOR NEXT