ರಾಜಕೀಯ

ದಲಿತ ಸಮುದಾಯಕ್ಕೆ ಡಿಸಿಎಂ ಸ್ಥಾನ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಅಪಾಯ: ಜಿ ಪರಮೇಶ್ವರ್ ಎಚ್ಚರಿಕೆ

Srinivasamurthy VN

ಬೆಂಗಳೂರು: ದಲಿತ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡದಿದ್ದರೆ ಕಾಂಗ್ರೆಸ್‌ಗೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಕೊರಟಗೆರೆ ಶಾಸಕ, ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಹೈಕಮಾಂಡ್ ಗೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿಯಾ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಘೋಷಿಸಿದ ಸ್ವಲ್ಪ ಸಮಯದ ಬಳಿಕ ಪರಮೇಶ್ವರ್ ಈ ಎಚ್ಚರಿಕೆ ನೀಡಿದ್ದಾರೆ. 

ನಾನೊಬ್ಬನೇ ಡಿಸಿಎಂ ಆಗಿರಬೇಕೆಂದು ಡಿ.ಕೆ. ಶಿವಕುಮಾರ್ ಅವರು ಹೈಕಮಾಂಡ್ ಮುಂದೆ ಷರತ್ತು ಇಟ್ಟಿದ್ದಾರೆ ಎನ್ನಲಾಗಿದೆ ಎಂಬ ಮಾತಿಗೆ ಉತ್ತರಿಸಿದ ಪರಮೇಶ್ವರ್ ಅವರು, ಶಿವಕುಮಾರ್ ಅವರ ದೃಷ್ಟಿಯಿಂದ ಅದು ಸರಿ ಇರಬಹುದು. ಆದರೆ, ಹೈಕಮಾಂಡ್ ದೃಷ್ಟಿಕೋನ ಖಂಡಿತಾ ಬೇರೆ ಇರುತ್ತದೆ. ಈ ಬಗ್ಗೆ ಹೈಕಮಾಂಡ್ ನಿರ್ಧಾರ ಕೈಗೊಳ್ಳಬೇಕು ಎಂದು ನಾವು ನಿರೀಕ್ಷಿಸುತ್ತೇವೆ ಎಂದೂ ಪರಮೇಶ್ವರ್ ಹೇಳಿದರು.

‌ದಲಿತ ಸಮುದಾಯ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದೆ. ಈ ನಿರೀಕ್ಷೆಗಳನ್ನು ಅರ್ಥ ಮಾಡಿಕೊಂಡು ನಮ್ಮ ಹೈಕಮಾಂಡ್ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಅದು ಆಗದಿದ್ದರೆ ಸ್ವಾಭಾವಿಕವಾಗಿಯೇ ಅದಕ್ಕೆ ಪ್ರತಿಕ್ರಿಯೆ ಬರುತ್ತವೆ. ಅದನ್ನು ನಾನು ಹೇಳುವ ಅಗತ್ಯವಿಲ್ಲ. ಮುಂದೆ ಈ ಬಗ್ಗೆ ಮನವರಿಕೆ ಆಗುತ್ತದೆ. ಅದರ ಬದಲು ಈಗಲೇ ನಿರ್ಧಾರ ಕೈಗೊಂಡರೆ ಉತ್ತಮ. ಇಲ್ಲದಿದ್ದರೆ, ಇದರಿಂದ ಪಕ್ಷಕ್ಕೆ ಅಪಾಯವಿದೆ. ಇದನ್ನು ಅರ್ಥ ಮಾಡಿಕೊಳ್ಳಿ ಎಂದು ವರಿಷ್ಠರಿಗೆ ಹೇಳಲು ಬಯಸುತ್ತೇನೆ’ಎಂದು ಪರಮೇಶ್ವರ್ ಹೇಳಿದರು.

ನಾನು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದೆ. ಆದರೆ ಈಗ ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿರಬೇಕು. ಆದ್ದರಿಂದ ಮುಂದಿನ ದಿನಗಳಲ್ಲಿ ಅವರು ಏನು ಮಾಡುತ್ತಾರೆ ಎಂಬುದನ್ನು ಕಾದು ನೋಡೋಣ, ಸದ್ಯಕ್ಕೆ ಅವರು ಇಬ್ಬರ ಬಗ್ಗೆ ಘೋಷಣೆ ಮಾಡಿದ್ದಾರೆ..ಸಚಿವ ಸಂಪುಟ ವಿಸ್ತರಣೆ ವೇಳೆ ಯಾವ ರೀತಿ ನ್ಯಾಯ ಕೊಡಿಸುತ್ತಾರೋ ಕಾದು ನೋಡಬೇಕಿದೆ ಎಂದರು.

''ಹೈಕಮಾಂಡ್ ಸಿಎಂ, ಡಿಸಿಎಂ ಘೋಷಣೆ ಮಾಡಿದೆ. ಸಿದ್ದರಾಮಯ್ಯ ಅವರು ನಮ್ಮ ಪಕ್ಷದಿಂದ ಎರಡನೇ ಬಾರಿಗೆ ಸಿಎಂ ಆಗುತ್ತಿದ್ದಾರೆ, ಅವರು ಉತ್ತಮ ಆಡಳಿತ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇವೆ, ಭರವಸೆ ನೀಡಿರುವುದರಿಂದ ಜನರ ನಿರೀಕ್ಷೆಗಳು ನಮ್ಮ ಮೇಲೆ ಭಾರಿ ಪ್ರಮಾಣದಲ್ಲಿವೆ. ನಮ್ಮ ಪ್ರಣಾಳಿಕೆಯಲ್ಲಿ ಉತ್ತಮ ಆಡಳಿತವಿದೆ. ನಾನು ಹೈಕಮಾಂಡ್ ನಿರ್ಧಾರವನ್ನು ಸ್ವಾಗತಿಸುತ್ತೇನೆ ಮತ್ತು ಉತ್ತಮ ಆಡಳಿತ ನೀಡುವಲ್ಲಿ ಅವರು ನಮ್ಮೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇನೆ ಎಂದು ಹೇಳಿದರು.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸಮ್ಮಿಶ್ರ ಸರ್ಕಾರದಲ್ಲಿ ಡಿಸಿಎಂ ಆಗಿ ಪರಮೇಶ್ವರ್ ಕೆಲಸ ಮಾಡಿದ್ದರು. ಅತ್ಯಂತ ದೀರ್ಘಾವಧಿ(8 ವರ್ಷ) ಕೆಪಿಸಿಸಿ ಅಧ್ಯಕ್ಷರಾಗಿ ಸಹ ಕೆಲಸ ಮಾಡಿದ್ದಾರೆ. ತುಮಕೂರು ಜಿಲ್ಲೆಯ ಕೊರಟಗೆರೆಯನ್ನು ಪ್ರತಿನಿಧಿಸುವ ಪರಮೇಶ್ವರ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ 2013ರ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರು. ಆಗ ಅವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿದ್ದರು, ಆದರೆ ಅವರು ಸೋತಿದ್ದರಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ (2013-2018) ಎಂಎಲ್‌ಸಿಯಾಗಿ ಆಯ್ಕೆಯಾಗಿ ಸಚಿವರಾದರು.

SCROLL FOR NEXT