ರಾಜಕೀಯ

'ಕೈ' ಪಾಳಯದಲ್ಲಿ ಸಂಚಲನ ಸೃಷ್ಟಿಸಿದ '5 ವರ್ಷ ಸಿದ್ದು ಸಿಎಂ' ಹೇಳಿಕೆ; ಆಂತರಿಕ ವಿಚಾರಗಳ ಬಗ್ಗೆ ಮಾತನಾಡದಂತೆ ನಾಯಕರಿಗೆ ಹೈ ಕಮಾಂಡ್ ಸೂಚನೆ

Manjula VN

ಬೆಂಗಳೂರು: ಮುಂದಿನ 5 ವರ್ಷ ಸಿದ್ದರಾಯ್ಯ ಅವರೇ ಮುಖ್ಯಮಂತ್ರಿ ಎಂಬ ಸಚಿವ ಎಂ.ಬಿ.ಪಾಟೀಲ್ ನೀಡಿರುವ ಹೇಳಿಕೆ ಕೈ ಪಾಳಯದಲ್ಲಿ ತಳಮಳ ಸೃಷ್ಟಿಸಿದ್ದು, ಈ ನಡುವಲ್ಲೇ ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಮಾತನಾಡದಂತೆ ನಾಯಕರಿಗೆ ಹೈಕಮಾಂಡ್ ಖಡಕ್ ಸೂಚನೆ ನೀಡಿದೆ.

ಪಕ್ಷದ ಆಂತರಿಕ ವಿಚಾರಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಿ ಗೊಂದಲ ಸೃಷ್ಟಿಸದಂತೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯ ಐದು ವರ್ಷಗಳ ಕಾಲ ಸಿಎಂ ಆಗಿ ಮುಂದುವರೆಯಲಿದ್ದು, ಅಧಿಕಾರ ಹಂಚಿಕೆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಎಂಬಿ ಪಾಟೀಲ್ ಅವರು ಸೋಮವಾರ ಹೇಳಿಕೆ ನೀಡಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಡಿಕೆ.ಶಿವಕುಮಾರ್ ಅವರು, ಯಾರಾದರೂ ಏನು ಬೇಕಾದರೂ ಹೇಳಿಕೊಳ್ಳಲಿ. ನಾನು ಆ ಬಗ್ಗೆ ಏನೂ ಮಾತಾಡುವುದಿಲ್ಲ. ಅಧಿಕಾರ ಮತ್ತಿತರ ಪಕ್ಷದ ವಿಚಾರಗಳನ್ನು ನೋಡಿಕೊಳ್ಳಲು ಎಐಸಿಸಿ ಇದೆ. ಕಾಂಗ್ರೆಸ್ ರಾಷ್ಟ್ರೀಯ ಮುಖಂಡರು ಇದ್ದಾರೆ. ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಮಾತ್ರ ನಮ್ಮ ಆದ್ಯತೆ ಎಂದು ಹೇಳಿದ್ದಾರೆ.

ಡಿಕೆ.ಸುರೇಶ್ ಅವರು ಪ್ರತಿಕ್ರಿಯೆ ನೀಡಿ, ನಾನು ಎಂಬಿ ಪಾಟೀಲ್ ಗೆ ತೀಕ್ಷ್ಣವಾದ ಎಚ್ಚರಿಕೆ ಕೊಡಬಲ್ಲೆ. ಆದರೆ ಈಗ ಅದು ಬೇಡ. ಅವರ ಹೇಳಿಕೆಗೆ ಹೆಚ್ಚಿನ ಮಾಹಿತಿ ಬೇಕಾದರೆ ಸುರ್ಜೇವಾಲರನ್ನೇ ಕೇಳಿ. ಎಂಬಿ ಪಾಟೀಲ್ ಗೆ ಹೇಳಿ ಇದೆಲ್ಲ ಬೇಡ ಅಂತ. ನನಗೂ ಎಂಬಿ ಪಾಟೀಲ್ ಹೇಳಿಕೆಗೆ ತೀಕ್ಷ್ಣ ಉತ್ತರ ನೀಡಲು ಬರುತ್ತದೆ ಎಂದು ತಿಳಿಸಿದ್ದರು.

ಹೊಸ ಸರ್ಕಾರ ಆಡಳಿತದತ್ತ ಗಮನ ಹರಿಸಬೇಕು ಮತ್ತು ಪಕ್ಷದ ಆಂತರಿಕ ಸಮಸ್ಯೆಗಳು ಅಥವಾ ಅಧಿಕಾರ ಹಂಚಿಕೆಯ ಬಗ್ಗೆ ಮಾತನಾಡಬಾರದು ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ನಡುವೆ ಎಂಬಿ.ಪಾಟೀಲ್ ಅವರ ಹೇಳಿಕೆಯನ್ನು ಅಸ್ತ್ರ ಮಾಡಿಕೊಂಡ ಬಿಜೆಪಿ, ಸರ್ಕಾರದ ವಿರುದ್ಧ ವ್ಯಂಗ್ಯ ಮಾತುಗಳನ್ನಾಡಿದೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ರಾಜ್ಯದ ಮಹಾಜನತೆಗೆ ‘ಗ್ಯಾರಂಟಿಗಳ’ ಹೆಸರಿನಲ್ಲಿ ವಂಚಿಸಿದ ಕಾಂಗ್ರೆಸ್, ಇದೀಗ ಪರಸ್ಪರ ಗುದ್ದಾಟ ನಡೆಸುತ್ತಿದೆ. ನಿನ್ನೆ ಮುಖ್ಯಮಂತ್ರಿಗಳ ಬಣದಿಂದ ಸಚಿವರಾದ ಎಂ.ಬಿ. ಪಾಟೀಲ್ ಎಚ್ಚರಿಕೆ ರವಾನಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಇಂದು ಉಪಮುಖ್ಯಮಂತ್ರಿಗಳ ಬಣದಿಂದ ಸಂಸದ ಡಿ.ಕೆ. ಸುರೇಶ್ ನೇರ ಬಾಣ ತಿರುಗಿಸಿದ್ದಾರೆ.ಮನೆಯೊಂದು, ಮೂರು ಬಣ, ಮೂವತ್ತು ಬಾಗಿಲಿನ ಈ ಎಟಿಎಂ ಸರ್ಕಾರದ ವಿರುದ್ಧ ಕರ್ನಾಟಕದ ಮಹಾಜನತೆ ಹಿಡಿಶಾಪ ಹಾಕಲಾರಂಭಿಸಿದ್ದಾರೆಂದು ವ್ಯಂಗ್ಯವಾಡಿದೆ.

ಸಿಎಂ ಆಯ್ಕೆಯ ಕಸರತ್ತು ಮುಗಿದ ಬೆನ್ನಲ್ಲೇ, ಸಿಎಂ ವ್ಯಾಲಿಡಿಟಿಯ ಬಗ್ಗೆ ಚರ್ಚೆ ಹುಟ್ಟಿತು. ಈಗ ಸಚಿವ ಸಂಪುಟ ವಿಸ್ತರಣೆಯ ಜಟಾಪಟಿ ಎರಡು ಬಣಗಳ ನಡುವೆ ತೀವ್ರವಾಗಿದೆ. ಆದರೆ, ಎಂಟಿಂ ಸರ್ಕಾರಕ್ಕಾಗಲಿ, ಸಿದ್ಧರಾಮಯ್ಯನವರಿಗಾಗಲಿ, ಡಿ.ಕೆ. ಶಿವಕುಮಾರರಿಗಾಗಲಿ ನಾಡ ಜನರಿಗೆ ನೀಡಿದ ಗ್ಯಾರಂಟಿಗಳನ್ನು ಈಡೇರಿಸಲು ಯಾವುದೇ ಆಸಕ್ತಿಯೂ ಇಲ್ಲ, ಉತ್ಸಾಹವೂ ತೋರಿಸುತ್ತಿಲ್ಲ,

ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗುವುದು ಇಲ್ಲ, ಅವರನ್ನು ಆಗಲು ಸಿದ್ದರಾಮಯ್ಯನವರು ಬಿಡುವುದು ಇಲ್ಲ. ಎಂಬಿ ಪಾಟೀಲ್ ಅವರು ಈ ಹೇಳಿಕೆಯ ಮೂಲಕ ಡಿಕೆ.ಶಿವಕುಮಾರ್ ಅವರಿಗೆ ನೇರವಾದ ಎಚ್ಚರಿಕೆಯನ್ನು ರವಾನಿಸಿದ್ದಾರಷ್ಟೇ. ಅದೇನೆ ಇದ್ದರೂ ಬಹುಮತ ದೊರಕಿದ ನಂತರದ ಈವರೆಗಿನ ಎಲ್ಲ ಬೆಳವಣಿಗೆಗಳನ್ನು ಗಮನಿಸಿದಾಗ, ಈ ಸರಕಾರ ಸುಸ್ತಿರವಾಗಿರಲಿದೆ ಎಂಬ ಯಾವ ಲಕ್ಷಣವೂ ಕಾಣುತ್ತಿಲ್ಲ, ಗ್ಯಾರಂಟಿಯೂ ಇಲ್ಲ. ದೆಹಲಿಯ ತಮ್ಮ ಹೈಕಮಾಂಡಿಗೆ ಕಪ್ಪ ಪೂರೈಸಬೇಕಾದ ಏಕೈಕ ಮಾನದಂಡದಲ್ಲಿ ಈ ಎಟಿಎಂ ಸರ್ಕಾರ ರಚನೆಯಾಗಿರುವುದು ಮತ್ತು ಅದಷ್ಟೇ ಇದರ ಆದ್ಯತೆಯಾಗಿರುವುದು ರಾಜ್ಯದ ದುರಂತ ಎಂದು ವ್ಯಂಗ್ಯವಾಡಿದೆ.

ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಕಾಂಗ್ರೆಸ್‌ನಲ್ಲಿ ಎರಡು ಶಕ್ತಿ ಕೇಂದ್ರಗಳಿದ್ದು, ಅದು ಕರ್ನಾಟಕದ ಅಭಿವೃದ್ಧಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಾರದು ಎಂದು ತಿಳಿಸಿದ್ದಾರೆ.

SCROLL FOR NEXT