ರಾಜಕೀಯ

ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನ ಗೆಲ್ಲಬೇಕು: ನೂತನ ಸಚಿವರಿಗೆ ಟಾರ್ಗೆಟ್ ಫಿಕ್ಸ್ ಮಾಡಿದ ಸಿಎಂ

Lingaraj Badiger

ಬೆಂಗಳೂರು: ಪೂರ್ಣ ಪ್ರಮಾಣದ ಸರ್ಕಾರ ರಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಲೋಕಸಭೆ ಚುನಾವಣೆಯಲ್ಲಿ ಒಟ್ಟು 28 ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಬೇಕು ಎಂದು ಟಾರ್ಗೆಟ್ ಫಿಕ್ಸ್ ಮಾಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಶನಿವಾರ 24 ಹೊಸ ಸಚಿವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಸಂಪುಟದ ಎಲ್ಲಾ 34 ಸ್ಥಾನಗಳನ್ನು ಭರ್ತಿ ಮಾಡಿದ್ದಾರೆ.

ಇನ್ನು ಒಂದು ವರ್ಷದಲ್ಲಿ ಲೋಕಸಭೆ ಚುನಾವಣೆ ಬರಲಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಿಗೆ ಉಡುಗೊರೆಯಾಗಿ ಕನಿಷ್ಠ 20 ಲೋಕಸಭಾ ಕ್ಷೇತ್ರಗಳನ್ನಾದರೂ ಗೆಲ್ಲಲೇಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಈ ಗುರಿಯನ್ನು ಇಟ್ಟುಕೊಂಡು ಬದ್ಧತೆ, ಪ್ರಾಮಾಣಿಕತೆ ಮತ್ತು ಚಾಣಾಕ್ಷತನದಿಂದ ನಿಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಮುಖ್ಯಮಂತ್ರಿಗಳು ಸಚಿವರುಗಳಿಗೆ ಸೂಚನೆ ನೀಡಿದ್ದಾರೆ ಎಂದು ಸಿಎಂ ಕಚೇರಿಯ ಪ್ರಕಟಣೆ ತಿಳಿಸಿದೆ.

ನಾವು ನೀಡಿರುವ ಭರವಸೆಗಳು ಜನರಿಗೆ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಬೇಕು, ಹಿಂದಿನ ತಪ್ಪುಗಳು ಈ ಬಾರಿ ಮರುಕಳಿಸಬಾರದು ಎಂದು ಅವರು ಸಿಎಂ ಎಚ್ಚರಿಕೆ ನೀಡಿದ್ದಾರೆ.

ನಾಡಿನ ಜನತೆ ಅಭೂತಪೂರ್ವ ಬಹುಮತದಿಂದ ಗೆಲ್ಲಿಸಿ ನಮಗೆ ಬಹಳ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಅವರ ನಿರೀಕ್ಷೆಗೆ ತಕ್ಕಂತೆ ಜನಪರ ಆಡಳಿತ ನೀಡಬೇಕಾದ ಹೊಣೆಗಾರಿಕೆ ನಮ್ಮ ಮೇಲಿದೆ. ಜನರ ಸಮಸ್ಯೆಗಳನ್ನು ಕೇಳಿಸಿಕೊಳ್ಳಿ. ತಮ್ಮ ತಮ್ಮ ಕ್ಷೇತ್ರದಲ್ಲೇ ಸಮಸ್ಯೆ ಬಗೆಹರಿಸಲು ಬೇಕಾದ ಕ್ರಿಯಾಶೀಲತೆಯನ್ನು ರೂಢಿಸಿಕೊಳ್ಳಿ. ಸಣ್ಣ ಪುಟ್ಟ ಕೆಲಸಗಳಿಗೂ ಕ್ಷೇತ್ರದ ಜನ ಸರ್ಕಾರಿ ಕಚೇರಿಗಳಿಗೆ ಪದೆ ಪದೆ ಅಲೆಯುವುದನ್ನು ತಪ್ಪಿಸಿ. ಜನರು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳಲು ಬಸ್ಸು, ರೈಲು ಹತ್ತಿಕೊಂಡು ವಿಧಾನಸೌಧಕ್ಕೆ ಬರುವ ಹೊರೆಯನ್ನು ತಪ್ಪಿಸಿ ಎಂದು ಸಿಎಂ ಸೂಚಿಸಿದ್ದಾರೆ.

SCROLL FOR NEXT