ರಾಜಕೀಯ

ಕಿಯೋನಿಕ್ಸ್ ಅವ್ಯವಹಾರ: ತನಿಖೆ ನಂತರ ಬಿಜೆಪಿಯ ಮಾಜಿ ಸಚಿವರು ಪರಪ್ಪನ ಅಗ್ರಹಾರದ ಮುದ್ದೆ ರುಚಿ ನೋಡುವುದು ಖಚಿತ!

Nagaraja AB

ಬೆಂಗಳೂರು: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮದ(ಕಿಯೋನಿಕ್ಸ್ ) ರೂ.500 ಕೋಟಿ ಅವ್ಯವಹಾರದ ತನಿಖೆ ಪೂರ್ಣಗೊಂಡ ನಂತರ ಬಿಜೆಪಿಯ ಹಲವು ಮಾಜಿ ಸಚಿವರು ಪರಪ್ಪನ ಅಗ್ರಹಾರದ ಮುದ್ದೆಯ ರುಚಿ ನೋಡುವುದು ಖಚಿತ ಎಂದು ಕಾಂಗ್ರೆಸ್ ಹೇಳಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಕಾಂಗ್ರೆಸ್, ಬಿಜೆಪಿ ಹಿಂದಿನ ತಮ್ಮ ಕಮಿಷನ್ ವ್ಯವಹಾರಗಳ ಬಿಲ್ ಗಳನ್ನು ಹಿಡಿದು ಈಗ ಬೊಬ್ಬೆ ಹೊಡೆಯುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಿಯೋನಿಕ್ಸ್ ನಲ್ಲಿ ನಡೆದ ರೂ. 500 ಕೋಟಿ ಅಕ್ರಮ ಅವ್ಯವಹಾರಗಳು ಈಗ ಹೊರಬರುತ್ತಿವೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಕಿಯೋನಿಕ್ಸ್ ಅಕ್ರಮದ ತನಿಖೆ ನಡೆಸಲು ಪ್ರಿಯಾಂಕ್ ಖರ್ಗೆ ತೀರ್ಮಾನಿಸಿರುವುದಾಗಿ ತಿಳಿಸಿದೆ.

ಗುರುವಾರ ಲೆಕ್ಕಪರಿಶೋಧನಾ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪ್ರಿಯಾಂಕ್ ಖರ್ಗೆ, 2018-19 ರಿಂದ 2022-23ರ ಅವಧಿಯಲ್ಲಿ ಅವ್ಯವಹಾರ ನಡೆದಿರುವುದನ್ನು ಲೆಕ್ಕ ಪರಿಶೋಧಕರು ಪತ್ತೆ ಮಾಡಿದ್ದರು. ಕಂಪ್ಯೂಟರ್, ಲ್ಯಾಪ್ ಟಾಪ್, ಯುಪಿಎಸ್, ಸಿಸಿಟಿವಿ ಕ್ಯಾಮರಾ, ಸ್ಮಾರ್ಟ್ ತರಗತಿಯ ಉಪಕರಣಗಳು, ಟೇಬಲ್ ಗಳು ಸೇರಿದಂತೆ ವಿವಿಧ ಸಾಮಾಗ್ರಿಗಳ ಖರೀದಿ, ಪೂರೈಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ವಿವರಿಸಿದರು.
 

SCROLL FOR NEXT