ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ನೇಮಕದ ಬಗ್ಗೆ ಬಿಜೆಪಿಯ ಕೆಲವು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದರೂ, ಒಕ್ಕಲಿಗ ಮತ್ತು ಇತರ ಸಮುದಾಯಗಳ ನಾಯಕರು ತಮ್ಮ ಮುಂದಿನ ರಾಜಕೀಯ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಹೊಂದಾಣಿಕೆ ಮಾಡಿಕೊಂಡಿದ್ದಾರೆ.
ಮಾಜಿ ಸಚಿವ ವಿ.ಸೋಮಣ್ಣ ನೇತೃತ್ವದ ಬಿಜೆಪಿಯ ವೀರಶೈವ ಲಿಂಗಾಯತ ಸಮುದಾಯದ ಮುಖಂಡರ ಬಣವು ಡಿಸೆಂಬರ್ ಮೊದಲ ವಾರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪಕ್ಷದ ಹೈಕಮಾಂಡ್‌ಗೆ ‘ದೂರು’ ನೀಡುವ ನಿರೀಕ್ಷೆಯಿದ್ದು, ಒಕ್ಕಲಿಗ ಮುಖಂಡರು ಮತ್ತು ಇತರ ಸಮುದಾಯದ ಮುಖಂಡರು ವಿಜಯೇಂದ್ರ ಜೊತೆಗೆ ಸಂಬಂಧವನ್ನು ಮುಂದುವರೆಸಲು ಬಯಸಿದ್ದಾರೆ.
ವಿಜಯೇಂದ್ರ ನೇಮಕದಿಂದ ಅಸಮಾಧಾನಗೊಂಡಿದ್ದ ಸಿಟಿ ರವಿ ಮತ್ತಿತರ ನಾಯಕರು ವಂಶ ರಾಜಕಾರಣದ ವಿಚಾರ ಪ್ರಸ್ತಾಪಿಸಿದ್ದರು. ವಿಜಯೇಂದ್ರ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಗೈರಾಗಿದ್ದ ಸಿಟಿ ರವಿ ಇತ್ತೀಚೆಗೆ ಅವರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಭಾನುವಾರ, ಪಕ್ಷದ ಕಛೇರಿಯಲ್ಲಿ ನಡೆದ ಸಂವಿಧಾನ ದಿನದ ಕಾರ್ಯಕ್ರಮದಲ್ಲಿ ಇಬ್ಬರೂ ವೇದಿಕೆಯನ್ನು ಹಂಚಿಕೊಂಡರು ಮತ್ತು 2024 ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ ನಾವು ಒಂದಾಗಿದ್ದೇವೆ ಎಂಬ ಸಂದೇಶವನ್ನು ಕಳುಹಿಸಿದರು.
ಇದನ್ನೂ ಓದಿ: ಸೋಮಣ್ಣ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ, ಬರಲಿಲ್ಲ ಅಂದ್ರೆ ಏನು ಮಾಡೋಕೆ ಆಗುತ್ತೆ: ಬಿ ಎಸ್ ಯಡಿಯೂರಪ್ಪ
ಈ ಹಿಂದಿನ ಚುನಾವಣೆಯಲ್ಲಿ ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾಗ ಒಕ್ಕಲಿಗರು ವಿಜಯೇಂದ್ರ ವಿರುದ್ಧ ಹೋಗದ ಕಾರಣ, ಮುಂಬರುವ ಲೋಕಸಭಾ ಚುನಾವಣೆಯಲ್ಲೂ ಇದು ನೆರವಾಗುವ ಸಾಧ್ಯತೆಯಿದೆ. ಗೋವಿಂದ ಕಾರಜೋಳ ಮತ್ತು ಬಿ ಶ್ರೀರಾಮುಲು ಸೇರಿದಂತೆ ಎಸ್‌ಸಿ/ಎಸ್‌ಟಿ ನಾಯಕರಿಗೂ ವಿಜಯೇಂದ್ರ ಅವರ ನೇಮಕದ ಬಗ್ಗೆ ಯಾವುದೇ ಬೇಸರವಿದ್ದಂತಿಲ್ಲ. ಏಕೆಂದರೆ ಅವರಿಗೂ ವೀರಶೈವ-ಲಿಂಗಾಯತ ಸಮುದಾಯದ ಬೆಂಬಲ, ವಿಶೇಷವಾಗಿ ಚುನಾವಣೆಯಲ್ಲಿ ಯಡಿಯೂರಪ್ಪ ಅವರ ಬೆಂಬಲ ಅಗತ್ಯ ಎಂದು ರಾಜಕೀಯ ಪಂಡಿತರು ಹೇಳುತ್ತಾರೆ.
ರವಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ವೀರಶೈವ-ಲಿಂಗಾಯತ ಸಮುದಾಯದ ಕಾಂಗ್ರೆಸ್ ಅಭ್ಯರ್ಥಿ ಎದುರು ಸೋತರು. ಏಕೆಂದರೆ ಅವರು ಸಮುದಾಯ ಮತ್ತು ಯಡಿಯೂರಪ್ಪ ಕುಟುಂಬದ ದ್ವೇಷಿ ಎಂಬ ಹಣೆಪಟ್ಟಿ ಹೊಂದಿದ್ದರು. ಆದ್ದರಿಂದ, ಅವರು ಇನ್ನು ಮುಂದೆ ಅವರನ್ನು ವಿರೋಧಿಸಲು ಬಯಸುವುದಿಲ್ಲ ಎಂದು ಬಿಜೆಪಿ ಮುಖಂಡರೊಬ್ಬರು ಹೇಳಿದರು. ಆದರೆ ಎಸ್‌ಸಿ ಸಮುದಾಯದಿಂದ ಬಂದಿರುವ ಹಿರಿಯ ನಾಯಕ ಮತ್ತು ಮಾಜಿ ಸಚಿವ ಅರವಿಂದ ಲಿಂಬಾವಳಿ ಅವರು ಯಡಿಯೂರಪ್ಪ ಕುಟುಂಬದ ವಿರುದ್ಧ ನಿರಂತರವಾಗಿ ವಿಷಯಗಳನ್ನು ಪ್ರಸ್ತಾಪಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಲಿಂಬಾವಳಿ ಹಾಗೂ ಮತ್ತೊಬ್ಬ ಮಾಜಿ ಸಚಿವ ಹಾಗೂ ಎಸ್‌ಟಿ ಮುಖಂಡ ರಮೇಶ್ ಜಾರಕಿಹೊಳಿ ಅವರು ಹೈಕಮಾಂಡ್ ಬಳಿಗೆ ತೆರಳಲಿರುವ ನಿಯೋಗದಲ್ಲಿದ್ದಾರೆ ಎಂದು ಸೋಮಣ್ಣ ಹೇಳಿದ್ದಾರೆ. ಕುತೂಹಲಕಾರಿವೆಂದರೆ, ರಮೇಶ್ ಜಾರಕಿಹೊಳಿ ವಿಜಯೇಂದ್ರ ಅವರೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದು, ಅವರು ಸೋಮಣ್ಣ ಅವರನ್ನು ಬೆಂಬಲಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕು.