ಎಚ್.ಡಿ ಕುಮಾರಸ್ವಾಮಿ 
ರಾಜಕೀಯ

ನವರಾತ್ರಿಗೂ ಮೊದಲೆ ಕತ್ತಲೆ ಭಾಗ್ಯ; ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು: ಎಚ್.ಡಿ. ಕುಮಾರಸ್ವಾಮಿ

ರಾಜ್ಯ ಕಾಂಗ್ರೆಸ್ ಸರಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ, ಸರಿ. ಶೀಘ್ರವೇ ಅರೆಬರೆ ಅಲ್ಲದ ಪರಿಪೂರ್ಣವಾದ 6ನೇ ಗ್ಯಾರಂಟಿ (!?) ಕೊಡಲು ಸನ್ನಾಹವನ್ನೂ ನಡೆಸಿದೆ! ಅದರ ಹೆಸರು ಕತ್ತಲೆಭಾಗ್ಯ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರ ಈಗಾಗಲೇ 5 ಅರೆಬರೆ ಗ್ಯಾರಂಟಿಗಳನ್ನು ಕೊಟ್ಟು ಕೈ ತೊಳೆದುಕೊಂಡಿದೆ, ಸರಿ. ಶೀಘ್ರವೇ ಅರೆಬರೆ ಅಲ್ಲದ ಪರಿಪೂರ್ಣವಾದ 6ನೇ ಗ್ಯಾರಂಟಿ (!?) ಕೊಡಲು ಸನ್ನಾಹವನ್ನೂ ನಡೆಸಿದೆ! ಅದರ ಹೆಸರು ಕತ್ತಲೆಭಾಗ್ಯ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಈ ಸಂಬಂಧ ಸುದೀರ್ಘ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಡಿಸೆಂಬರ್ ತಿಂಗಳ ಹೊತ್ತಿಗೆ ಕರ್ನಾಟಕ ಈ ಕತ್ತಲೆ ಭಾಗ್ಯದ ಕೂಪಕ್ಕೆ ಬೀಳುವುದು ಖಚಿತ. ಜನವರಿ ಅಂದರೆ 2024ರ ಹೊಸ ವರ್ಷಕ್ಕೆ ತಾನು ಕೊಟ್ಟ ಗೃಹಜ್ಯೋತಿಗೆ ಎಳ್ಳುನೀರು ಬಿಟ್ಟು ಕಗ್ಗತ್ತಲ ಕರ್ನಾಟಕದ ಉದಯ ಮಾಡಿಸುವುದು ಗ್ಯಾರಂಟಿ. ಗ್ಯಾರಂಟಿ. ಇದು ಸತ್ಯ ಎಂದಿದ್ದಾರೆ.

ಕಾವೇರಿ ಬಗ್ಗೆ ಸರಕಾರ ಕಳ್ಳಾಟ ಆಡಿದೆ. ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯದ ವಿರುದ್ಧ ನಿಲುವಳಿ ಸೂಚನೆ ಅಂಗೀಕಾರವಾಗಿದೆ. ಎಮ್ಮೆ ಚರ್ಮದ ಸರಕಾರಕ್ಕೆ ಕಾವೇರಿ ಒಡಲಾಳದ ಬೇಗುದಿ ಬಗ್ಗೆ ಜಾಣ ಕುರುಡು. ಸರಕಾರ ರಾಜ್ಯದ ಉದ್ದಗಲಕ್ಕೂ ಅನಧಿಕೃತ ಲೋಡ್ ಶೆಡ್ಡಿಂಗ್ ಹೇರಿ ದಿನಕ್ಕೆ 2 ಗಂಟೆ ವಿದ್ಯುತ್ತಿಗೂ ದಿಕ್ಕಿಲ್ಲದ ದುಸ್ಥಿತಿ ನಿರ್ಮಾಣ ಮಾಡಿದೆ. ನಮ್ಮ ರೈತರಿಗೆ ಲೋಡ್ ಶೆಡ್ಡಿಂಗ್, ತಮಿಳುನಾಡಿಗೆ ಸಮೃದ್ಧ ನೀರು ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ವಿದ್ಯುತ್ ಅಭಾವದಿಂದ ಬೆಳೆಗಳು ಒಣಗುತ್ತಿವೆ. ನಾಲೆಗಳಲ್ಲೂ ನೀರಿಲ್ಲ, ಬೋರ್ ವೆಲ್ ಗಳಿಂದ ಪಂಪ್ ಮಾಡಲು ವಿದ್ಯುತ್ತೂ ಇಲ್ಲ. ಮೊದಲೇ ಕಷ್ಟದಲ್ಲಿರುವ ರೈತನ ಬೆನ್ನಿನ ಮೇಲೆ ಬರೆಯ ಮೇಲೆ ಬರೆ ಎಳೆಯುತ್ತದೆ ರಾಜ್ಯ ಕಾಂಗ್ರೆಸ್  ಸರಕಾರ ಎಂದು ಹರಿಹಾಯ್ದಿದ್ದಾರೆ.

ವಿದ್ಯುತ್ ಕ್ಷಾಮಕ್ಕೆ ಮೊದಲೇ ಕರ್ನಾಟಕ ವಿದ್ಯುತ್ ಉತ್ಪಾದನೆಯಲ್ಲಿ ಬಂಜರು ಬಿದ್ದಿದೆ. ಉತ್ಪಾದನೆಗೆ ಅಗತ್ಯವಾದ ಮೂಲಗಳ ಕ್ಷಾಮಕ್ಕೆ ತುತ್ತಾಗಿ, ಪರರಾಜ್ಯಗಳ ಮುಂದೆ ದೈನೇಸಿಯಾಗಿ ನಿಂತು ವಿದ್ಯುತ್ ಸಾಲಕ್ಕೆ ಅರ್ಜಿ ಹಾಕಿಕೊಳ್ಳುತ್ತಿದೆ. ಜಲ, ಪವನ, ಸೌರ ವಿದ್ಯುತ್ ಉತ್ಪಾದನೆ ಕುಸಿತವಾಗಿದೆ. ಇದು ದೂರದೃಷ್ಟಿಯ ಕೊರತೆ ಹಾಗೂ ನಿರ್ವಹಣೆಯ ವೈಫಲ್ಯ ಎಂದು ಆರೋಪಿಸಿದ್ದಾರೆ.

ಜಲಾಶಯಗಳು ಖಾಲಿಯಾಗಿದ್ದು, ವಿದ್ಯುತ್ ಉತ್ಪಾದನೆ ಮಿತವಾಗಿ ಮಾಡುವಂತೆ ಸರಕಾರವೇ ಆದೇಶಿಸಿದೆ. ಇನ್ನೊಂದೆಡೆ ಉಷ್ಣ ವಿದ್ಯುತ್ ಸ್ಥಾವರಗಳು ಕಲ್ಲಿದ್ದಲು ಬವಣೆಯಿಂದ ಅಲ್ಪಸ್ವಲ್ಪ ಉತ್ಪಾದಿಸುತ್ತಿವೆ. ರಾಜ್ಯದ ಒಟ್ಟಾರೆ ಬೇಡಿಕೆಯಲ್ಲಿ ಶೇ.20ರಷ್ಟು ವಿದ್ಯುತ್ತನ್ನು ಸರಕಾರ ಹೊರಗಿನಿಂದಲೇ ಪಡೆಯುತ್ತಿದೆ. ರಾಜ್ಯವನ್ನು ವಿದ್ಯುತ್ ಸಾಲಕ್ಕೆ ತಳ್ಳಿ, ಕರುನಾಡನ್ನು ಬರ್ಬಾದ್ ಮಾಡಲಿದೆ ಕಾಂಗ್ರೆಸ್ ಸರಕಾರ. ಆದರೆ, ವಿದ್ಯುತ್ ಸಾಲ ನೀಡುವ ಸ್ಥಿತಿಯಲ್ಲಿ ಇತರೆ ರಾಜ್ಯಗಳೂ ಇಲ್ಲ. ಹಾಗಾದರೆ ಮುಂದೇನು? ಸಂಬಂಧಪಟ್ಟ ಸಚಿವರು ಮೌನವ್ರತ ಮಾಡುತ್ತಿದ್ದಾರೆಯೇ? ಎಂದು ಎಚ್ ಡಿ ಕೆ ಪ್ರಶ್ನಿಸಿದ್ದಾರೆ.

ಅಡ್ಡದಾರಿಯಲ್ಲಿ ಅಧಿಕಾರ ಪಡೆಯಲು 5 ಗ್ಯಾರಂಟಿ ಕೊಟ್ಟ ಕಾಂಗ್ರೆಸ್, 6ನೇ ಗ್ಯಾರಂಟಿ ಕತ್ತಲೆಭಾಗ್ಯವನ್ನು ನವರಾತ್ರಿಗೆ ಮೊದಲೇ ಖಾತರಿಪಡಿಸಿದೆ. ಈ ಹೊಸ ಭಾಗ್ಯ ಡಿಸೆಂಬರಿಗೋ, ಜನವರಿಗೋ ಎಂದಷ್ಟೇ ತೀರ್ಮಾನ ಆಗಬೇಕಿದೆ. ನಿರ್ವಹಣೆ, ರಿಪೇರಿ ನೆಪದಲ್ಲಿ ಇಡೀ ದಿನ ವಿದ್ಯುತ್ ಕಡಿತ ಮಾಡುತ್ತಿರುವ ಸರಕಾರದ ಸದಾರಮೆ ಆಟ ಈಗಷ್ಟೇ ಗೊತ್ತಾಗುತ್ತಿದೆ. ಹಿಂದೆ ಬರದಂತಹ ಕ್ಲಿಷ್ಟ ಸ್ಥಿತಿ ಇದ್ದರೂ ವಿದ್ಯುತ್ ಖರೀದಿಗೆ ಹಣ ಇರುತ್ತಿತ್ತು. ಈಗ ಖಜಾನೆ ಖಾಲಿಯಂತೆ!!

ಲೋಕಸಭೆ ಚುನಾವಣೆವರೆಗೂ ಜನರನ್ನು ಗ್ಯಾರಂಟಿಗಳ ಅಮಲಿನಲ್ಲಿ ತೇಲಿಸಿ ತೇಲಿಸಿ.. ಆಮೇಲೆ ಕೈ ಎತ್ತಿಬಿಡುವ ದುಷ್ಟ ಹುನ್ನಾರ ಸರಕಾರದ್ದು. ಆ ಕಾರಣಕ್ಕಾಗಿಯೇ ಸರಕಾರ ಸತ್ಯ ಮರೆಮಾಚಿ ಮೊಸಳೆ ಕಣ್ಣೀರು ಹಾಕುತ್ತಿದೆ. ಆದರೆ, ಕತ್ತಲೆಭಾಗ್ಯ ಕರುಣಿಸುವ ಮುನ್ನ ಜನತೆಗೆ ಸತ್ಯವನ್ನೇ ಹೇಳಲಿ. ಬೇಡ ಎಂದವರು ಯಾರು? ಕೂಡಲೇ ವಿದ್ಯುತ್ ದುಸ್ಥಿತಿಯ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿದ್ಯುತ್ ಸಾಲಕ್ಕೂ ದಿಕ್ಕಿಲ್ಲದ ಸರಕಾರವು, ಖಾಸಗಿ ವಿದ್ಯುತ್ ಪೂರೈಕೆದಾರರಿಗೆ ಕಳೆದ ಆರೇಳು ತಿಂಗಳಿಂದ ಬಾಕಿ ಹಣ ನೀಡಿಲ್ಲ ಎನ್ನುವ ಮಾಹಿತಿ ಇದೆ. ಕೆಲ ಕಂಪನಿಗಳಿಗೆ 11 ತಿಂಗಳಿಂದ ಬಿಡಿಗಾಸು ಕೊಟ್ಟಿಲ್ಲವಂತೆ. ಇದು ಹೌದಾ? ಹೌದು ಎಂದಾದರೆ, ರಾಜ್ಯದ ಭವಿಷ್ಯದ ಗತಿ ಏನು? ಕೃಷಿ, ಕೈಗಾರಿಕೆಗಳ ಪಾಡೇನು? ಬೇಕಾಬಿಟ್ಟಿ ಬೆಲೆ ಏರಿಕೆ ಬರೆ  ಎಳೆಸಿಕೊಂಡು ಏದುಸಿರು ಬಿಡುತ್ತಿರುವ ಜನರಿಗೆ ಸರಕಾರದ ಉತ್ತರವೇನು?

ಕೃತಕ ಕತ್ತಲು ಸೃಷ್ಟಿಸಿ ಕಬ್ಬೆಕ್ಕಿನಂತೆ ಕದ್ದು ಹಾಲು ಕುಡಿಯುತ್ತೇವೆ ಎಂದರೆ ಆಗುವುದಿಲ್ಲ. ಜನರಿಗೂ ಕಳ್ಳಬೆಕ್ಕಿನ ಕಣ್ಣಾಮುಚ್ಚಾಲೆ ಈಗೀಗ ಚೆನ್ನಾಗಿ ಅರ್ಥವಾಗುತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT